ಬೆಂಗಳೂರು: ಸೋಮವಾರದಿಂದ ಶಾಲೆಗಳು ಪುನರ್ ಪ್ರಾರಂಭವಾಗಲಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಕೊರೊನಾ ಆತಂಕದಲ್ಲಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ.. ಪೋಷಕರು ಆತಂಕಪಡುವ ಅಗತ್ಯ ಇಲ್ಲ, ವಿದ್ಯಾರ್ಥಿಗಳು ಕೂಡ ಆತಂಕಕ್ಕೆ ಒಳಗಾಗದೇ ಶಾಲೆಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅತ್ಯಂತ ಕಾಳಜಿ ಮಾಡಿದ್ದೇವೆ
ಶಾಲೆ ಆರಂಭಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಕೋವಿಡ್ ವಿಚಾರಕ್ಕೆ ಸಂಬಂಧಿಸಿ ಸೂಕ್ತ ನಿರ್ದೇಶನ ಕೊಟ್ಟಿದ್ದೇವೆ. ಮಕ್ಕಳನ್ನ ಹೇಗೆ ಕರೆದುಕೊಂಡು ಬರಬೇಕು? ಪೋಷಕರನ್ನ ಹೇಗೆ ಅನುಮತಿ ಪಡೆದುಕೊಳ್ಳಬೇಕು. ಶಾಲೆಯನ್ನ ಶುಚಿತ್ವವನ್ನ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ತಿಳಿಸಲಾಗಿದೆ.
ಶಾಲೆಗಳಿಗೆ ಬೊಮ್ಮಾಯಿ ಭೇಟಿ
ಮತ್ತೆ ಪೋಷಕರು ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋದ ಮೇಲೆ ಹೇಗೆ ನಿಗಾ ಇಡಬೇಕು? ಅನ್ನೋದ್ರ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ಮಾತ್ರವಲ್ಲ ಶಿಕ್ಷಣ ಸಚಿವ ನಾಗೇಶ್ ಜೊತೆ ನಾನೂ ಕೂಡ ಎರಡ್ಮೂರು ಶಾಲೆಗಳಿಗೆ ಹೋಗಿ ತಪಾಸಣೆ ಮಾಡುತ್ತೇನೆ. ಶಾಲೆ ಆರಂಭಿಸಲು ನಾವು ಅತ್ಯಂತ ಕಾಳಜಿ ಮಾಡಿದ್ದೇವೆ. ಮಕ್ಕಳು ಶಾಲೆಗೆ ಬರಬೇಕು, ಪೋಷಕರೂ ಸಹ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರ ಗಮನ ಇಡುತ್ತೆ, ಜೊತೆಗೆ ಪೋಷಕರೂ ಕೂಡ ಜಾಗೃತರಾಗಿರಬೇಕು ಎಂದು ಮನವಿ ಮಾಡಿಕೊಂಡರು.