ಮೂಲ್ಕಿ: ಸಿಮೆಂಟ್ ತಯಾರಿಕೆ ಘಟಕದ ಅವರಣದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಪೈಪ್ ಉರುಳಿಬಿದ್ದು ಮಗು ಸಾವನ್ನಪ್ಪಿದ ಘಟನೆ ಕಾರ್ನಾಡು ಸದಾಶಿವ ನಗರದ ಆಶ್ರಯ ಕಾಲನಿಯ ಸಮೀಪ ನಡೆದಿದೆ.
ಲಿಂಗಪ್ಪಯ್ಯ ಕಾಡಿನ ನಿವಾಸಿ ರಾಮು ಎಂಬುವರ ಮಗ ಯುವರಾಜ (4) ಮೃತಪಟ್ಟ ಬಾಲಕ. ಲಿಂಗಪ್ಪಯ್ಯ ಈ ಘಟಕದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ದಾಸ್ತಾನು ಇರಿಸಿದ್ದ ಸಿಮೆಂಟ್ ಪೈಪ್ ಬಳಿ ಯುವರಾಜ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದರು.
ಈ ವೇಳೆ ಪೇರಿಸಿಟ್ಟಿದ್ದ ಪೈಪ್ ,ಮಗುವಿನ ಮೇಲೆ ಉರುಳಿಬಿದ್ದಾಗ ಇತರ ಮಕ್ಕಳು ಬೊಬ್ಬೆ ಹಾಕಿದ್ದಾರೆ. ತಕ್ಷಣ ಘಟಕದ ಸಿಬ್ಬಂದಿ ಧಾವಿಸಿ ಬಂದು ಮಗುವನ್ನು ಮುಕ್ಕದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























