ವಿಟ್ಲಪಡ್ನೂರು: ಗ್ರಾಮ ಪಂ.ಆಡಳಿತದ ಅಂಧ ದರ್ಭಾರ್.! ರಾಜ್ಯ ಹೆದ್ದಾರಿಗೆ ತಾಗಿಕೊಂಡೇ ಅಕ್ರಮ ಕಟ್ಟಡ ತಲೆಯಿತ್ತಿದ್ದರೂ ಕಣ್ಮುಚ್ಚಿ ಕುಳಿತ ಪಂ.ಆಡಳಿತ, ಉಪಾಧ್ಯಕ್ಷನ ಮನೆ ಸಮೀಪದಲ್ಲೇ ಕಾನೂನು ಗಾಳಿಗೆ ತೂರಿ ನೆಲೆಯೂರಿದ ಅಕ್ರಮ ಕಟ್ಟಡ..! ಹೌದು. ಆಡಳಿತ ಯಂತ್ರ ಪ್ರಜ್ಞಾಹೀನ ಸ್ಥಿತಿ ತಲುಪಿದರೆ ಜನ ಸಾಮಾನ್ಯರ ಗೋಳು ಹೇಳೋದ್ಯಾರಲ್ಲಿ.? ಹೇಳಿದ್ರೂ ಕೇಳೋಳ್ಯಾರು.? ಎಂಬುದಕ್ಕೆ ತಾಜಾ ನಿದರ್ಶನ ವಿಟ್ಲಪಡ್ನೂರು ಗ್ರಾಮದಲ್ಲಿ ನಡೆದಿದೆ.
ಪಂ.ವ್ಯಾಪ್ತಿಯ ಕೊಡಂಗಾಯಿ ಜಂಕ್ಷನ್ ನಲ್ಲಿ ಉಪಾಧ್ಯಕ್ಷರ ಮನೆಯಿಂದ ಕೇವಲ 70 ಮೀಟರ್ ಅಂತರದಲ್ಲಿ ಗಾಣದಮೂಲೆ ಎಂಬಲ್ಲಿಗೆ ಸಂಪರ್ಕವಾಗುವ ಕವಲು ರಸ್ತೆಯಿದ್ದು ಕೆಲಸಮಯಗಳ ಹಿಂದಷ್ಟೇ ಕಾಂಕ್ರಿಟೀಕರಣವಾಗಿದೆ. ಇದೇ ರಸ್ತೆಯ ಆರಂಭದಲ್ಲೇ ಇತ್ತೀಚೆಗೆ ಹೆದ್ದಾರಿಗೆ ತಾಗಿಕೊಂಡೇ ಅಕ್ರಮ ಕಟ್ಟಡವೊಂದು ರಾಜಾರೋಷವಾಗಿ ತಲೆಯಿತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜ್ಯ ಹೆದ್ದಾರಿ ಬದಿಯಲ್ಲಿ 25 ಮೀಟರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ 40 ಮೀಟರ್ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಕಟ್ಟಡ ರಚನೆಗೆ ಸ್ಥಳೀಯ ಪಂ.ಗಳು ಪರವಾನಿಗೆ ನೀಡುವಂತಿಲ್ಲ ಎಂಬ ಸ್ಪಷ್ಟ ಆದೇಶವನ್ನು ಸುಪ್ರೀಂಕೋರ್ಟ್ 1999ರಲ್ಲಿ ನೀಡಿದ್ದರೂ ಹೆದ್ದಾರಿ ಅಧಿಕಾರಿಗಳು ಮತ್ತು ಸ್ಥಳೀಯ ಪಂ.ನ ಆಡಳಿತ, ಪಿಡಿಒಗಳು ಎಚ್ಚರಗೊಂಡಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನೇ ಇವರೆಲ್ಲಾ ಗಾಳಿಗೆ ತೂರಿದರೆಂದರೆ ಇನ್ಯಾರು ಜಾರಿಗೆ ತರಲು ಸಾಧ್ಯವಲ್ಲವೇ.?
ಹಾಗೆಂದ ಮಾತ್ರಕ್ಕೆ ಕಾನೂನು ಪಾಲಿಸದ ಇಂತಹ ಭ್ರಷ್ಟ ಅಧಿಕಾರಿಗಳನ್ನ, ಪಂ.ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಆಧಿಕಾರ ಜನಸಾಮಾನ್ಯರಿಗಿಲ್ಲವೇ.? ಇದ್ದೇ ಇದೆ. ಈಗಾಗಲೇ ಸುಪ್ರೀಂಕೋರ್ಟ್ ಆದೇಶದ ಪ್ರತಿ ಲಭ್ಯವಾಗಿದ್ದು ಬೇಜವಾಬ್ದಾರಿ ಪಂ.ಆಡಳಿತ, ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲು ಸಿದ್ಧತೆ ನಡೆಯುತ್ತಿದೆ.
ಪಂ.ವ್ಯಾಪ್ತಿಯ ಗಾಣದಮೂಲೆಯ ಹತ್ತಾರು ಕುಟುಂಬಗಳು ಈ ಹಿಂದೆ ಹಲವಾರು ಬಾರಿ ನಿಮಗೆ ಮನವಿ ಮಾಡಿದ್ದರೂ ಕಣ್ಣು ಕಾಣ್ತಿಲ್ವೇ..ನಮ್ಮ ಪರಿಸರಕ್ಕೆ ಅಗತ್ಯ ಸರಕುಗಳನ್ನು ಕೊಂಡೊಯ್ಯಲು ಸರಕು ವಾಹನಗಳಿಗೆ ಈ ಅಕ್ರಮ ಕಟ್ಟಡದಿಂದಾಗಿ ಕಷ್ಟವಾಗುತ್ತಿದ್ದರೂ ಜನಪ್ರತಿನಿಧಿಗಳೆಂಬ ಕುರುಡರಿಗೆ ಎಚ್ಚರವಾಗ್ತಿಲ್ಲವೇಕೆ.? ಇನ್ನಾದರೂ ಪಂ.ಆಡಳಿತ, ಹೆದ್ದಾರಿ ಅಧಿಕಾರಿಗಳು ಅಕ್ರಮ ಕಟ್ಟಡವನ್ನ ತೆರವು ಮಾಡಿ ಗಾಣದಮೂಲೆ ಪರಿಸರ ವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಇಲ್ಲವಾದಲ್ಲಿ ತಮ್ಮ ವಿರುದ್ಧ ಸೂಕ್ತ ಪ್ರಾಧಿಕಾರದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಲು ಹಿಂಜರಿಯುವುದಿಲ್ಲ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ಗಾಣದಮೂಲೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.