ಮಂಗಳೂರು: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ನಗದು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಗದಗ ನಿವಾಸಿಗಳಾಗಿದ್ದು, ಬರ್ಕೆ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಚ್ಮನ್ ಆಗಿರುವ ಯಶೋಧಾ ಎಂಬವರ ಪುತ್ರಿ ರೇಷ್ಮಾ ( 21) ಅವರ ನಿಶ್ಚಿತಾರ್ಥ ಆ. 21 ರಂದು ನಡೆದಿತ್ತು.
ನಿಶ್ಚಿತಾರ್ಥ ಸಂದರ್ಭ ಗಂಡಿನ ಮನೆಯವರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, 50 ಸಾವಿರ ರೂಪಾಯಿ ಮೌಲ್ಯದ ಉಂಗುರ, 60 ಸಾವಿರ ರೂಪಾಯಿ ಮೌಲ್ಯದ ಕಿವಿಯೋಲೆ, ಕಾಲು ಗೆಜ್ಜೆ ನೀಡಿದ್ದು, ಇವುಗಳನ್ನೆಲ್ಲಾ ಈಕೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲದೆ ಕೂಲಿ ಕೆಲಸ ಮಾಡಿ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿದ್ದ 90 ಸಾವಿರ ರೂಪಾಯಿಯನ್ನು ಅಕ್ಬರ್ ಅಲಿ ಎಂಬವರ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ ಎಂದು ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.