ಉಡುಪಿ: ಅಂಗಾಂಗಗಳನ್ನು ದಾನ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಬಿಜೆಪಿ ಮುಖಂಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಣಿ ಸದಸ್ಯೆ ತುಳುಕೂಟ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಆಶಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮಂಗಳವಾರ ಸಂಜೆ ಉಡುಪಿಯ ಕುಕ್ಕಿಕಟ್ಟೆಯಲ್ಲಿರುವ ತಮ್ಮ ಮನೆಯಲ್ಲಿ ಆಶಾ ಶೆಟ್ಟಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಮರಣ ಪತ್ರವನ್ನು ಬರೆದಿಟ್ಟಿದ್ದು, ತನ್ನ ಕಣ್ಣು ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಿ ಇದು ನನ್ನ ಆಸೆ ಎಂದು ಉಲ್ಲೇಖಿಸಿದ್ದಾರೆ.
ದೇಹವನ್ನು ಉಡುಪಿ ನಗರ ಪೊಲೀಸರು ಮತ್ತು ಸಮಾಜ ಸೇವಕರು ಕುಟುಂಬಸ್ಥರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದರು. ಅಲ್ಲೇ ಮರಣೋತ್ತರ ಪರೀಕ್ಷೆಗಳನ್ನು ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಮೃತಪಟ್ಟವರ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಕುಟುಂಬಸ್ಥರು ಚರ್ಚೆ ಮಾಡಿ ಆಶಾ ಶೆಟ್ಟಿ ಅವರ ಮೃತದೇಹವನ್ನು ಮಣಿಪಾಲ ಕೆಎಂಸಿಗೆ ರವಾನೆ ಮಾಡಲಾಯ್ತು. ಮೃತಪಟ್ಟು ಮೂರು ಗಂಟೆಯ ಒಳಗೆ ಪ್ರಕ್ರಿಯೆಗಳೆಲ್ಲ ನಡೆದಿರುವುದರಿಂದ ಕಣ್ಣುಗಳು ದಾನಕ್ಕೆ ಯೋಗ್ಯವಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ತನ್ನ ಮಗನ ಸಾವಿನ ನಂತರ ಮಾನಸಿಕವಾಗಿ ಆಶಾ ಶೆಟ್ಟಿ ಸಾಕಷ್ಟು ಕುಗ್ಗಿದ್ದರು ಎನ್ನಲಾಗಿದೆ. ಮಗಳಿಗೆ ಮದುವೆಯಾಗಿದ್ದು, ಆತ್ಮಹತ್ಯೆಗೂ ಮೊದಲು ಕರೆ ಮಾಡಿ ಚೆನ್ನಾಗಿ ಮಾತನಾಡಿದ್ದರು ಎಂಬ ಮಾಹಿತಿಯಿದೆ.
ಮೃತದೇಹವನ್ನು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಅಂತ್ಯ ಸಂಸ್ಕಾರ ವಿಧಿ ನಡೆಯಲಿದೆ.