ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಕೇಂದ್ರ ಗುಪ್ತಚರ ಎಜೆನ್ಸಿಗಳು ಹೈ ಅಲರ್ಟ್ ಆಗಿವೆ. ರಾಜ್ಯ ಕರಾವಳಿಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕಿರುವ ಕೇಂದ್ರ ಬೇಹುಗಾರಿಕಾ ಸಂಸ್ಥೆಗಳು.. ರಾಜ್ಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಟಲೈಟ್ ಫೋನ್ಗಳು ಮತ್ತೆ ಆ್ಯಕ್ಟಿವ್ ಆಗಿರುವ ಬಗ್ಗೆ ಚುರುಕುಗೊಂಡಿದ್ದು ತನಿಖೆ ನಡೆಸುತ್ತಿವೆ.
ಬೇಹುಗಾರಿಕಾ ಅಧಿಕಾರಿಗಳು ರಾಜ್ಯದ 4 ಕಡೆ ಸ್ಯಾಟಲೈಟ್ ಫೋನ್ ಇಂಟರ್ ಸೆಪ್ಟ್ ಮಾಡಿದ್ದವು. ನಿಗೂಢ ವ್ಯಕ್ತಿಗಳು ಕರಾವಳಿ ಹಾಗು ಮಲೆನಾಡು ಭಾಗದ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಕಲೆಹಾಕಿವೆ ಎನ್ನಲಾಗಿದೆ.
ಕರಾವಳಿ ಭಾಗದಲ್ಲಿ ಸ್ಲೀಪರ್ ಸೆಲ್ಗಳು ಆ್ಯಕ್ಟಿವ್ ಆಗಿರುವ ಬಗ್ಗೆಯೂ ಮಾಹಿತಿ ಇದ್ದು ಜಿಲ್ಲೆಗಳ ಪ್ರಮುಖ ಸ್ಥಳಗಳಿಗೆ ಬಿಗಿ ಭದ್ರತೆ ಒದಗಿಸುವಂತೆ ಸೂಚನೆ ನೀಡಲಾಗಿದೆ. ಹಬ್ಬಗಳ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಎಚ್ಚರಿಕೆಯನ್ನ ಕೇಂದ್ರ ಗುಪ್ತಚರ ಅಧಿಕಾರಿಗಳು ನೀಡಿದ್ದಾರಂತೆ.
ಸಮುದ್ರ ಮದ್ಯೆ ನಡೆಯುತ್ತಿರುವ ಚಟುವಟಿಕೆಗಳ ಮೇಲೂ ತೀವ್ರ ನಿಗಾ ಇಡಲು, ಕಡಲ ತಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಾಗೂ ಬೋಟ್ ಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಇದೆ.