ಕಾರ್ಕಳ: ಇಲ್ಲಿನ ಶಿರ್ಲಾಲುನಲ್ಲಿ ಗೋಹತ್ಯೆ ವಿರುದ್ಧ ಸಂಘಟನೆಗಳಿಂದ ಪ್ರತಿಭಟನಾ ಸಭೆ ನಡೆಯುತ್ತಿರುವಾಗಲೇ, ಅದೇಪರಿಸರದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲೆತ್ನಿಸಿದ ಘಟನೆ ಭಾನುವಾರ ನಡೆದಿದೆ.
ಎರಡು ಹಸುಗಳ ಕಾಲುಗಳನ್ನು ಕಟ್ಟಿ ಮಾರುತಿ 800 ಕಾರಿನಲ್ಲಿ ಹಿಂಸಾತ್ಮಕವಾಗಿ ತುರುಕಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ತಡೆದಾಗ ಆರೋಪಿಗಳು ಬಿಟ್ಟು ಪರಾರಿಯಾಗಿದ್ದಾರೆ. ಹಿಂದೂ ಜಾಗರಣೆ ವೇದಿಕೆ ಹಾಗೂ ಬಜರಂಗದಳ ಕಾರ್ಯಕರ್ತರು ಜಂಟಿಯಾಗಿ ಕಾರ್ಯಚರಣೆ ನಡೆಸಿ ಎರಡು ಹಸುಗಳನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

ಶಿಲಾರ್ಲಿನಿಂದ ಕೆರ್ವಾಸೆ ಕಡೆಗೆ ಕಾರು ತೆರಳುತ್ತಿರುವ ಮಾಹಿತಿ ಪಡೆದ ಸಂಘಟನೆಯ ಕಾರ್ಯಕರ್ತರು ಅದನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಮಸೀದಿ ಬದಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಈ ವೇಳೆ ಕಾರಿನಲ್ಲಿದ್ದವರು ಗೋವು ಹಾಗೂ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.ಗೋ ಕಳ್ಳರು ಪಕ್ಕದಲ್ಲೇ ಅಡಗಿ ಕೂತಿದ್ದಾರೆ ಎಂಬ ಮಾಹಿತಿ ಹಬ್ಬಿದ್ದ ಹಿನ್ನಲೆಯಲ್ಲಿ ಅಲ್ಲಿ ಕಾರ್ಯ ಕರ್ತರ ದಂಡು ಜಮಾವಣೆಗೊಂಡು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಕಳೆದ ಕೆಲವು ತಿಂಗಳುಗಳಿಂದ ಈ ಪರಿಸರದಲ್ಲಿ ಪದೇ ಪದೇ ಗೋ ಕಳ್ಳತನ, ಅಕ್ರಮ ಸಾಗಾಟ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಇಲ್ಲಿ ಹಿಂಜಾವೇ ಚಲೋ ಶಿರ್ಲಾಲು ಎಂಬ ಪ್ರತಿಭಟನಾ ಸಭೆ ನಡೆಸುತ್ತಿತ್ತು. ಇದಕ್ಕೆ ಸವಾಲುಎಂಬಂತೆ ನಡೆದ ಈ ಅಕ್ರಮ ಗೋ ಕಳ್ಳಸಾಗಣೆ ಬಗ್ಗೆ ಹಿಂದೂ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಅಜೆಕಾರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.