ಬೆಂಗಳೂರು: ನಗರದ ನಗರತ್ ಪೇಟೆಯಲ್ಲಿರುವ ಪತ್ರಕಾಳಿ ಲಾರಿ ಸರ್ವೀಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಮೃತಪಟ್ಟ ಇಬ್ಬರು ಉತ್ತರ ಭಾರತದವರು ಎನ್ನಲಾಗಿದೆ. ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಭಾರಿ ಸದ್ದಿಗೆ ಸ್ಥಳೀಯರು ಮನೆಯಾಚೆ ಬಂದಿದ್ದಾರೆ. ಸ್ಫೋಟ ತೀವ್ರತೆಗೆ ಭೂ ಕಂಪನದ ರೀತಿಯಲ್ಲಿ ಅನುಭವ ಆಗಿದೆ. ಅಲ್ಲದೇ ಮೃತರ ದೇಹಗಳು ಛಿದ್ರ, ಛಿದ್ರವಾಗಿ ಗೋದಾಮಿನಿಂದ ಹೊರಗೆ ಹಾರಿ ಬಿದ್ದಿವೆ.

ಇನ್ನು ಸ್ಫೋಟದ ತೀವ್ರತೆಗೆ 10 ವಾಹನಗಳಿಗೆ ಹಾನಿಯಾಗಿದೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಘಟನೆ ಸಂಭವಿಸಿದ ಕೂಡಲೇ ವಿವಿ ಪುರಂ ಠಾಣೆ ಪೊಲೀಸರ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.