ನವದೆಹಲಿ: ರೋಹಿಣಿ ಕೋರ್ಟ್ ಆವರಣ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎರಡು ಗ್ಯಾಂಗ್ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗ್ಯಾಂಗ್ ಸ್ಟರ್ ಜಿತೇಂದ್ರ ಗೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೋಗಿ ಕೋರ್ಟ್ಗೆ ಹಾಜರಾಗುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಮತ್ತಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸರ ಮೋಸ್ಟ್ ವಾಂಟೆಂಡ್ ಗ್ಯಾಂಗ್ ಸ್ಟರ್ ಆಗಿದ್ದ ಜಿತೇಂದ್ರ ಜೈಲಿನಲ್ಲಿ ಇದ್ದುಕೊಂಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಜಿತೇಂದ್ರ ಗೋಗಿಯನ್ನು ಇಂದು ಪೊಲೀಸರು ರೋಹಿಣಿ ಕೋರ್ಟ್ನ 2ನೇ ಹಾಲ್ನಲ್ಲಿ ನ್ಯಾಯಾಧೀಶರ ಎದುರು ಹಾಜರಾಗಲು ಕರೆತಂದಿದ್ದರು. ಈ ವೇಳೆ ಆತನ ವಿರೋಧಿ ಟಿಲು ಗ್ಯಾಂಗ್ನ ಇಬ್ಬರು ಶೂಟರ್ಗಳು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು 35 ರಿಂದ 40 ಸುತ್ತು ಗುಂಡು ಹಾರಿಸಿ ಪ್ರತಿ ದಾಳಿ ನಡೆಸಿ ಇಬ್ಬರು ಶೂಟರ್ಗಳನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಏಪ್ರಿಲ್ನಲ್ಲಿ ಗೋಗಿಯನ್ನು ದೆಹಲಿಯ ಸ್ಪೇಷಲ್ ಸೆಲ್ ಪೊಲೀಸರು MCOCA ಕಾಯ್ದೆಯ ಅಡಿ ಬಂಧಿಸಿದ್ದರು. ಆತನ ವಿರುದ್ಧ 19 ಕೊಲೆ ಯತ್ನ, ಸುಲಿಗೆ, ದರೋಡೆ, ಕಾರು ಅಪಹರಣ, ರಾಬರಿ ಪ್ರಕರಣಗಳು ದಾಖಲಿಸಲಾಗಿತ್ತು. 30 ವರ್ಷದ ಗೋಗಿ 2010ರಲ್ಲಿ ತಂದೆಯ ಸಾವಿನ ಬಳಿಕ ಕ್ರೈಂ ಲೋಕಕ್ಕೆ ಕಾಲಿಟ್ಟಿದ್ದ. 2010ರಲ್ಲಿ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ವಿರುದ್ಧ ಗೋಗಿ ಗುಂಡಿನ ದಾಳಿ ನಡೆಸಿದ್ದ, ಆ ಬಳಿಕ ದೆಹಲಿ ವಿವಿ, ಶ್ರದ್ಧಾನಂದ ಕಾಲೇಜು ಚುನಾವಣೆ ಸಂದರ್ಭದಲ್ಲಿ ಆತನ ಸ್ನೇಹಿತನೊಂದಿಗೆ ಇಬ್ಬರ ಮೇಲೆ ಮತ್ತೆ ಗುಂಡಿನ ದಾಳಿ ನಡೆಸಿದ್ದ. 2011ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ಗೋಗಿ ಬಂಧನ ಮಾಡಲಾಗಿತ್ತು. ಆ ಬಳಿಕ ಹಣ ವಸೂಲಿ ಮಾಡಲು ಆತ ಯುವಕರೊಂದಿಗೆ ಹೊಸ ಗ್ಯಾಂಗ್ ರಚನೆ ಮಾಡಿಕೊಂಡಿದ್ದ ಎನ್ನಲಾಗಿದೆ.