ಪುತ್ತೂರು: ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಹಾಗೂ ಕೊರೋನಾ ಜಾಗೃತಿ ಕಾರ್ಯಕ್ರಮವೂ ಸೆ.24 ರಂದು ಅಕ್ಷಯ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರ್ಯಾಪು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ, ತ್ಯಾಗ ಮಾಡದೆ ಉನ್ನತ ಮಟ್ಟದ ಸಾಧನೆ ಅಸಾಧ್ಯ. ವಿದ್ಯಾರ್ಥಿಗಳು ತ್ಯಾಗಭರಿತ ಮನೋಭಾವನೆಯಿಂದ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಯಂತಹ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ವಿದ್ಯಾರ್ಥಿಗಳ ಭವಿಷ್ಯದ ದಿಕ್ಕನ್ನು ನಿರ್ಧರಿಸಬಲ್ಲುದು ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾದ ಗ್ರಾಮ ಪಂಚಾಯತ್ ಆರ್ಯಾಪು ಇದರ ಅಭಿವೃದ್ಧಿ ಅಧಿಕಾರಿ ನಾಗೇಶ್ ಮಾರ್ತಾಜೆ ಮಾತನಾಡಿ, ಮಾನವನ ಬದುಕಿನಲ್ಲಿ ಸೇವಾ ಮನೋಭಾವನೆ ಬಹಳ ಮುಖ್ಯ. ಸಾಮಾಜಿಕ ಋಣ ತೀರಿಸಲು ಎನ್.ಎಸ್.ಎಸ್ ಒಂದು ಉತ್ತಮ ವೇದಿಕೆ. ಎನ್.ಎಸ್.ಎಸ್ ನಿಂದ ಶಿಸ್ತು, ಸಂಘಟನಾ ಚತುರತೆ, ವ್ಯಕ್ತಿತ್ವ ವಿಕಸನ, ಸಹಬಾಳ್ವೆ, ಸಮಾಜಮುಖಿ ಚಿಂತನೆ, ಆತ್ಮತೃಪ್ತಿ ಮೊದಲಾದ ಉತ್ತಮ ಅಂಶಗಳನ್ನು ಮೈಗೂಡಿಸಿಕೊಳ್ಳಬಹುದು. ಎನ್.ಎಸ್.ಎಸ್ ಸ್ವಯಂಸೇವಕರು ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತು ಬಾಳುವ ಗುಣ ಬೆಳೆಸಿಕೊಳ್ಳಬೇಕು. ಆ ಮೂಲಕ ಸಿಗುವ ಸಂತೋಷ, ಅನುಭವ ಮಹತ್ತರವಾದುದು. ಅವಕಾಶಗಳು ಬಂದೊದಗಿದಾಗ ಸಮರ್ಪಕವಾಗಿ ಬಳಸಿಕೊಳ್ಳುವುದು ಜಾಣತನವಾಗಿದೆ. ಯಾವುದೇ ಯಶಸ್ಸಿಗೆ ಸತತ ಕಠಿಣ ಪ್ರಯತ್ನಬೇಕು, ಆ ಪ್ರಯತ್ನ ಇಂದಿನಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ರವರು ನೂತನ ಕ್ಯಾಂಪಸ್‌ಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿ, ಎನ್.ಎಸ್.ಎಸ್ ಅನ್ನುವ ಸಂಘಟನೆಯು ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಹಮ್ಮಿಕೊಳ್ಳುವ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಬೇಕು. ಆ ಮೂಲಕ ಆತ್ಮವಿಶ್ವಾಸ, ನಾಯಕತ್ವ ಗುಣ, ಧನಾತ್ಮಕ ಚಿಂತನೆ ಮತ್ತು ಮನೋಧೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಎನ್.ಎಸ್.ಎಸ್ ಸ್ವಯಂಸೇವಕರು ಹುಮ್ಮಸ್ಸಿನಿಂದ ಕೈಗೊಳ್ಳುವ ಸ್ವಚ್ಛತೆಯಂತಹ ಚಟುವಟಿಕೆಗಳು ಇತರರಿಗೆ ಮಾದರಿಯಾಗಿರುತ್ತದೆ ಎಂದ ಅವರು ಆರ್ಯಾಪು ಗ್ರಾಮ ಪಂಚಾಯತ್‌ನ್ನು 2021-22ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳಿಗಾಗಿ ದತ್ತು ಪಡೆಯಲು ಅವರು ಮನವಿ ಮಾಡಿದರು.
ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಅಕ್ಷಯ ಕಾಲೇಜಿನ ಶ್ರೀಮತಿ ಪ್ರಿಯಾರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು.ಪ್ರಣಮ್ಯ ಸಿ.ಎ ಸ್ವಾಗತಿಸಿ, ಗಗನ್‌ದೀಪ್‌ರವರು ವಂದಿಸಿದರು. ಕು.ರಶ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಯೋಗಪಟು ಕು.ಪ್ರಣಮ್ಯ ಸಿ.ಎ, ಕಾಲೇಜು ನಾಯಕರಾದ ಗಗನ್‌ದೀಪ್ ಎ.ಬಿ, ಹಾಗೂ ಅಂತರಾಷ್ಟ್ರೀಯ ಯೋಗಪಟು ಪ್ರತೀಕ್ಷಾ ರೈಯವರನ್ನು ಅಭಿನಂದಿಸಲಾಯಿತು.