ಬಂಟ್ವಾಳ: ನಿಲ್ಲಿಸಲಾಗಿದ್ದ ಲಾರಿಯೊಂದು ದಿಢೀರನೆ ಚಲಿಸಿ ಚಾಲಕನನ್ನೆ ಬಲಿ ಪಡೆದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕಂಬ ಸಮೀಪದ ಪರ್ಲಿಯಾ ಕೊಡಂಗೆ ಎಂಬಲ್ಲಿ ನಡೆದಿದೆ.
ಬಾಗಲಕೋಟ ಜಿಲ್ಲೆಯ ಜಾವೂರು ನಿವಾಸಿ ಲಾರಿ ಚಾಲಕ ಬಾಲಪ್ಪ ಎ.ಜಾವೂರು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಾಲಪ್ಪ ಅವರು ಗುತ್ತಿಗೆ ಕೆಲಸ ನಿರ್ವಹಿಸುವ ಸಂಸ್ಥೆಯ ಲಾರಿ ಚಾಲಕರಾಗಿದ್ದರು. ಪರ್ಲಿಯಾ ಕೊಡಂಗೆ ಎಂಬಲ್ಲಿ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿ ನಡೆಯುತ್ತಿದ್ದು ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ.
ಈ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿಯ ಅವಧಿಯಲ್ಲಿ ಕೊಡಂಗೆ ಎಂಬಲ್ಲಿ ಖಾಲಿ ಜಾಗದಲ್ಲಿ ಜಲ್ಲಿ ರಾಶಿ ಹಾಕಲಾಗಿದ್ದು, ಕಾಮಗಾರಿಯ ಬಳಿಕ ಅಲ್ಲಿ ಉಳಿದ ಜಲ್ಲಿ ಕಲ್ಲುಗಳನ್ನು ಬೇರೆ ಕಾಮಗಾರಿಯ ಪ್ರದೇಶಕ್ಕೆ ಕೊಂಡು ಹೋಗುವ ಉದ್ದೇಶದಿಂದ ಬಾಲಪ್ಪ ಅವರು ಲಾರಿಯನ್ನು ಜಲ್ಲಿ ಲೋಡ್ ಮಾಡಲು ಕೊಡಂಗೆಯಲ್ಲಿ ನಿಲ್ಲಿಸಿದ್ದರು.
ಲಾರಿ ನಿಲ್ಲಿಸಿ ಅಲ್ಲೇ ಪಕ್ಕ ದಲ್ಲಿ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದ ಬಾಲಪ್ಪ ಅವರಿಗೆ ಲಾರಿ ನಿಧಾನವಾಗಿ ಮುಂದೆ ಚಲಿಸುತ್ತಿರುವ ಬಗ್ಗೆ ಜಲ್ಲಿ ಲೋಡ್ ಮಾಡುವ ಜೆಸಿಬಿ ಚಾಲಕ ಜೋರಾಗಿ ಹೇಳಿದಾಗ ತನ್ನಿಂದ ತಾನೇ ಚಲಿಸುವ ಲಾರಿಯನ್ನು ತಡೆಯಲು ಚಕ್ರದಡಿ ಕಲ್ಲು ಇಡುವ ಪ್ರಯತ್ನಕ್ಕೆ ಮುಂದಾದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.