ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದೆ. ಈ ಪ್ರಕರಣದಲ್ಲಿ ಆಪೆ ರಿಕ್ಷಾ ಚಾಲಕ ರಿಕ್ಷಾ ಸಮೇತ ಪರಾರಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಕೊಕ್ಕಡ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆಲಂಕಾರಿನಿಂದ ಹೋರಿ ಹಾಗೂ ದನವೊಂದನ್ನು ಕದ್ದು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಆಲಂಕಾರು-ನೆಲ್ಯಾಡಿ ಮಾರ್ಗವಾಗಿ ಕೊಕ್ಕಡಕ್ಕೆ ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾ ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿದೆ.
ಆರೋಪಿಗಳು ಪಲ್ಟಿಯಾಗಿದ್ದ ರಿಕ್ಷಾವನ್ನು ನಿಲ್ಲಿಸಿ ಕೆಳಕ್ಕೆ ಬಿದ್ದಿದ್ದ ದನ ಮತ್ತು ಹೋರಿಯನ್ನು ಪುನ: ಆಪೆ ರಿಕ್ಷಾದಲ್ಲಿ ತುಂಬಿಸಲು ಮುಂದಾಗಿದ್ದರು. ಈ ವೇಳೆ ಜನ ಸೇರುತ್ತಿದ್ದಂತೆ ಆಪೆ ರಿಕ್ಷಾ ಚಾಲಕ ಸಫೀಕ್ ಎಂಬಾತ ರಿಕ್ಷಾ ಸಮೇತ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಮತ್ತೊಬ್ಬನನ್ನು ವಿಚಾರಿಸಿದಾಗ ಆತ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಗುರುಪ್ರಸಾದ್(20) ಎಂದು ಹೇಳಿದ್ದು, ಪರಾರಿಯಾದವನ ಬಗ್ಗೆ ಕೇಳಿದಾಗ ಸಫೀಕ್ ಎಂದು ಹೇಳಿದ್ದು, ಇಬ್ಬರು ಸೇರಿಕೊಂಡು ಮಾಂಸ ಮಾಡುವ ಉದ್ದೇಶದಿಂದ ದನ ಮತ್ತು ಹೋರಿಯನ್ನು ಆಲಂಕಾರು ಪ್ರದೇಶದಿಂದ ಕದ್ದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿ ದೊರೆತ ಆರೋಪಿಯ ಮೊಬೈಲ್ ಫೋನ್ ಮತ್ತು 22,000 ರೂ. ಮೌಲ್ಯದ ದನ ಮತ್ತು ಹೋರಿಯನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಕುರಿತಂತೆ ನೆಲ್ಯಾಡಿ ಗ್ರಾಮದ ತೋಟ ನಿವಾಸಿ ಚೇತನ್ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ. ಕ್ರ.96/2021 ಕಲಂ: 11(ಡಿ) ಕಲಂ:66(1),192(ಎ) ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.