ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ದರ್ಬೆ-ಜನತಾ ಕಾಲನಿ-ರಸ್ತೆಯಿಂದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಗೈದ ಪ್ರಕರಣದಲ್ಲಿ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಸಿ-1(ಪೋಕ್ಸೋ) ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ತೀರ್ಪು ನೀಡಿದ್ದಾರೆ.
ಬಂಟ್ವಾಳ ವಿಟ್ಲ ಕಸ್ಬಾ ಉಕ್ಕುಡದ ನಿವಾಸಿ ಬಾಲಕೃಷ್ಣ ಅಪರಾಧಿಯಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಸೆ.27ರಂದು ಪ್ರಕಟಿಸುವ ಸಾಧ್ಯತೆ ಇದೆ.
2019ರ ಜು. 25ರಂದು ಅಪರಾಧಿ ಬಾಲಕೃಷ್ಣ ತನ್ನದೇ ಊರಿನ ಪರಿಚಿತ ಬಾಲಕಿ ಶಾಲೆಗೆ ಹೋಗುವಾಗ ಅಪಹರಿಸಿ ಮೂಡುಬಿದಿರೆ ನೆಲ್ಲಿಕಾರು ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಲ್ಲದೇ ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ.ಬಾಲಕಿ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಬೆಂಗಳೂರಿನಲ್ಲಿ ಆರೋಪಿ ಮತ್ತು ಬಾಲಕಿಯನ್ನು ಕಂಡ ಪೊಲೀಸರು ಸಂಶಯಗೊಂಡು ವಿಚಾರಿಸಿದಾಗ ವಿಟ್ಲ ಠಾಣೆಗೆ ಸಂಬಂಧಿಸಿದ ಪ್ರಕರಣ ಎಂಬುದು ಗೊತ್ತಾಯಿತು. ಬಳಿಕ ವಿಟ್ಲ ಪೊಲೀಸರು ಅವರೀರ್ವರನ್ನು ಕರೆದು ಕೊಂಡು ಬಂದಿದ್ದರು. ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 18 ಮಂದಿ ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಅಪಹರಣಕ್ಕೆ ಸಹಕರಿಸಿದ ಆರೋಪದಲ್ಲಿ ಪರಶುರಾಮನ ವಿರುದ್ಧವೂ ಪ್ರಕರಣ ದಾಖಲಾಗಿತ್ತು.