ಬೆಂಗಳೂರು: ಕಿರುತೆರೆ ಧಾರಾವಾಹಿ ಹಾಗೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಸೌಜನ್ಯಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ನಡೆದಿದೆ.
ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡೆತ್ನೋಟ್ ಬರೆದಿಟ್ಟು ಅಪಾರ್ಟ್ಮೆಂಟ್ನಲ್ಲಿ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೊಡ್ಡ ಬೆಲೆ ಗ್ರಾಮದ ಸನ್ ವರ್ಥ್ ಅಪಾರ್ಟ್ಮೆಂಟ್ನಲ್ಲಿ ನಟಿ ಸೌಜನ್ಯಾ ವಾಸಿಸುತ್ತಿದ್ದರು.
ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟಿರುವ ಸೌಜನ್ಯಾ, ನನ್ನ ಸಾವಿಗೆ ನಾನೇ ಕಾರಣ, ನನ್ನನ್ನು ಕ್ಷಮಿಸಿ ಬಿಡಿ ಎಂದು ಪತ್ರದಲ್ಲಿ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಮೂಲತಃ ಕುಶಾಲನಗರದ ಸೌಜನ್ಯಾ ಅವರು ತಮ್ಮ ಗೆಳೆಯನೊಂದಿಗೆ ಕಳೆದ ಕೆಲ ತಿಂಗಳಿನಿಂದ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಕನ್ನಡದ ಹಲವು ಧಾರಾವಾಹಿ ಹಾಗೂ ಚೌಕಟ್ಟು ಮತ್ತೆ ಫನ್ ಸಿನಿಮಾಗಳಲ್ಲಿ ನಟಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ತನ್ನ ಗೆಳೆಯನನ್ನು ಊಟ ತರಲು ಹೇಳಿ ಮನೆಯಿಂದ ಹೊರಕಳುಹಿಸಿದ್ದು, ಆತ ಮನೆಗೆ ವಾಪಸ್ ಬರೋ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದರಂತೆ. ಅಪಾರ್ಟ್ಮೆಂಟ್ಗೆ ಸೌಜನ್ಯಾ ಗೆಳೆಯ ವಾಪಸ್ ಬಂದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.