ಬೆಂಗಳೂರು: ಸಾವಿರ ಕನಸುಗಳನ್ನ ಹೊತ್ತು ಸಿನಿ ಜಗತ್ತಿಗೆ ಕಾಲಿಟ್ಟ ಯುವ ನಟಿ ಸೌಜನ್ಯ ಅಸಹಜ ಸಾವು ಬಣ್ಣದ ಲೋಕವನ್ನ ಬೆಚ್ಚಿ ಬೀಳಿಸಿದೆ. ಕಿರುತೆರೆ ನಟಿಯ ಸಾವಿನ ಹಿಂದೆ ಈಗ ಹಲವು ಅನುಮಾನಗಳೂ ಉಸಿರಾಡೋದಕ್ಕೆ ಶುರುವಾಗಿವೆ. ನಟಿಯ ಅಪ್ಪ, ಅಮ್ಮ ಮಗಳ ಸಾವಿನ ಬಗ್ಗೆ ತನಿಖೆ ಆಗಬೇಕು ಅಂತ ಕುಂಬಳಗೋಡು ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಾವಿರ ಕನಸುಗಳನ್ನ ಹೊತ್ತು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟಿ ಸೌಜನ್ಯ ಸಿನಿ ಪಯಣ ಅರ್ಧಕ್ಕೆ ನಿಂತು ಹೋಗಿದೆ. ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾದ ನಟಿ ಸಾವು ಪೋಷಕರನ್ನ ದಿಗ್ಭ್ರಮೆಗೊಳಿಸಿದೆ. ಮಗಳ ದುತಂರ ಸಾವಿನಿಂದಾಗಿ ಆಘಾತಕ್ಕೊಳಗಾಗಿರೋ ನಟಿಯ ಅಪ್ಪ ಪ್ರಭು ಮಾದಪ್ಪ ಮತ್ತು ಅಮ್ಮ ರೇಣುಕಾ ಈಗ ಠಾಣೆಗೆ ದೂರು ನೀಡಿದ್ದಾರೆ. ತೆಲುಗು ನಟ ಹಾಗೂ ಸೌಜನ್ಯ ಪಿ.ಎ ಮಹೇಶ್ ವಿರುದ್ಧ ದೂರು ನೀಡಿದ್ದಾರೆ. ಮಗಳ ಸಾವಿನ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹಿಸಿದ್ದಾರೆ. ನಟಿ ಸೌಜನ್ಯ ತಂದೆ ಮಾದಪ್ಪ ನೀಡಿರೋ ಕಂಪ್ಲೆಂಟ್ನಲ್ಲಿ ಹಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಒಂದಿಬ್ಬರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ದೂರಿನಲ್ಲಿ ಇಬ್ಬರ ವಿರುದ್ಧ ಆರೋಪ
ನನ್ನ ಮಗಳು 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಈ ವೇಳೆ ಆಕೆಗೆ ವಿವೇಕ್ ಎಂಬುವವನ ಪರಿಚಯವಾಗಿತ್ತು. ನಿನ್ನನ್ನೇ ಮದುವೆಯಾಗುತ್ತೇನೆಂದು ನನ್ನ ಮಗಳಿಗೆ ಪೀಡಿಸುತ್ತಿದ್ದ ಅನ್ನೋ ವಿಚಾರವನ್ನ ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿವೇಕ್ ಪೀಡಿಸುತ್ತಿದ್ದ ವಿಚಾರವನ್ನ ಸೌಜನ್ಯ, ನನ್ನ ಪತ್ನಿ ರೇಣುಕಾಳಿಗೆ ತಿಳಿಸಿದ್ದಳು. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ದಿನ ವಿವೇಕ್ ರೇಣುಕಾಗೆ ಬೆಳಗ್ಗೆ 9 ಕ್ಕೆ ಪೊನ್ ಕರೆ ಮಾಡಿದ್ದ. ನಿನ್ನ ಮಗಳು ನನ್ನನ್ನು ಮದುವೆಯಾಗದಿದ್ದರೆ ಸಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿರೋ ಬಗ್ಗೆಯೂ ಪ್ರಭು ಮಾದಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಮಗಳ ಸಾವಿಗೆ ನಟ ವಿವೇಕ್, ಮಹೇಶ್ ಕಿರುಕುಳವೇ ಕಾರಣವಾಗಿದ್ದು, ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಿ ಅಂತಾ ಆಗ್ರಹಿಸಿದ್ದಾರೆ. ಸದ್ಯ, ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ IPC 306 ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಕೇಸ್ ರಿಜಿಸ್ಟರ್ ಆಗಿದೆ. ಈ ದೂರಿನನ್ವಯ ವಿವೇಕ್ A1 ಆರೋಪಿಯಾಗಿದ್ದು, ಮಹೇಶ್ A2 ಆರೋಪಿಯಾಗಿದ್ದಾನೆ.
ಇವತ್ತು ಆರ್.ಆರ್.ಆಸ್ಪತ್ರೆಯಲ್ಲಿ ಮೃತ ನಟಿಯ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಮೃತ ದೇಹವನ್ನ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಕುಶಾಲನಗರ ತಾಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡ್ತೀವಿ ಅಂತ ನಟಿಯ ತಂದೆ ಮಾದಪ್ಪ ಹೇಳಿದ್ದಾರೆ. ಇನ್ನು ಮಗಳನ್ನ ಕಳೆದುಕೊಂಡ ಹೆತ್ತ ಕರುಳು ರೋಧಿಸಿದೆ. ಮಗಳು ಸೊಪ್ಪು ಪಲ್ಯ ಮಾಡಮ್ಮ ತಿನ್ನಕ್ಕೆ ಬರ್ತೀನಿ ಅಂತ ಹೇಳಿದ್ಳು. ಆದ್ರೆ ಸೊಪ್ಪು ಪಲ್ಯ ತಿನ್ನೋದಕ್ಕೆ ಮಗಳೇ ಬರಲಿಲ್ಲ ಅಂತ ನಟಿ ಸವಿ ತಾಯಿ ಕಣ್ಣೀರು ಇಟ್ಟಿದ್ದಾರೆ.
ಬೆಳಗ್ಗೆ ಕಾಲ್ ಮಾಡಿ ಊರಿಗೆ ಬರ್ತೀನಿ ಅಂತ ಹೇಳಿದ್ದ ಮಗಳು ಈಗ ಮಸಣ ಸೇರಿರೋದನ್ನ ಕಂಡು ಹೆತ್ತ ಜೀವಗಳು ಕಣ್ಣೀರು ಇಡುತ್ತಿವೆ. ಇಂಥದ್ದೊಂದು ಅನ್ಯಾಯ ಸಾವಿಗೆ ನ್ಯಾಯ ಸಿಗಬೇಕು ಅಂತ ಸೌಜನ್ಯ ತಂದೆ ತಾಯಿ ಠಾಣೆ ಮೆಟ್ಟಿಲೂ ಹತ್ತಿದ್ದಾರೆ. ಹೀಗಾಗಿ ಪೊಲೀಸರ ಮುಂದೆ ಸಾಕಷ್ಟು ಸವಾಲಿದೆ.