ಉಪ್ಪಿನಂಗಡಿ: ವಂಚನೆ ಜಾಲಕ್ಕೆ ಸಿಲುಕಿ ಮಲೇಷ್ಯಾದಲ್ಲಿ ಜೈಲು ಪಾಲಾಗಿರುವ ಮಗನನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕು ಎಂದು ತಾಯಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜ ಮನೆ ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಪತ್ನಿ ಮೀನಾಕ್ಷಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ದೂರಿನಲ್ಲಿ ತನ್ನ ಮಗ ಅಮಿತ್ ಕಾರಂಜಿ ಎಂಬಾತನನ್ನು ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಎಂಬವರು ಇಲೆಕ್ಟ್ರಾನಿಕ್ ವಸ್ತುಗಳನ್ನು ಮಲೇಶ್ಯಕ್ಕೆ ಕೊಂಡೊಯ್ಯುವ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದ್ದರು.

ಅದರಂತೆ 2013 ಮಾರ್ಚ್ 2ರಂದು ಆತ ಕೊಂಡೊಯ್ಯುವ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಮಾದಕ ದ್ರವ್ಯವನ್ನು ಇರಿಸಿ, ಮಲೇಷಿಯಾ ಪೊಲೀಸರ ವಶಕ್ಕೊಳಗಾಗಿದ್ದರು. ಘಟನೆ ನಡೆದ ಬಳಿಕ ಆರೋಪಿಗಳು ನಿಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಹೊಣೆ ನಮ್ಮದೆಂದು ತಿಳಿಸಿದ್ದರು.
ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ್ದರು. ಇತ್ತೀಚೆಗೆ ಮಗನಿಗೆ ಅಲ್ಲಿನ ನ್ಯಾಯಾಲಯದಲ್ಲಿ ಶಿಕ್ಷೆಯ ತೀರ್ಪು ಪ್ರಕಟವಾದ ಬೆನ್ನಿಗೆ ಆರೋಪಿಗಳು ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಮತ್ತು ನಿಮ್ಮ ಜೀವ ಉಳಿಯದು ಎಂದು ಜೀವ ಬೆದರಿಕೆಯೊಡ್ಡಿರುವುದಲ್ಲದೆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತಮ ಕೆಲಸ ಕೊಡಿಸುತ್ತೇನೆಂದು ಮಗನನ್ನು ನಂಬಿಸಿ, ಆತನು ಕೊಂಡೊಯ್ಯುವ ವಸ್ತುಗಳಲ್ಲಿ ಆತನಿಗೆ ಅರಿವಿಲ್ಲದೆ ಮಾದಕ ವಸ್ತುಗಳನ್ನಿರಿಸಿ ಆತನಿಂದ ಸಾಗಿಸಲ್ಪಡುವಂತೆ ಮಾಡಿ ಮಲೇಶ್ಯ ಕಾನೂನಿನ ಅನುಸಾರ ಆರೋಪಿಯನ್ನಾಗಿಸಿ ಇದೀಗ ಕಠಿಣ ಶಿಕ್ಷೆಗೆ ಗುರಿಯಾಗಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿರುವ ಅವರು, ನಿರ್ದೋಷಿಯಾದ ನನ್ನ ಮಗನ ನಿರಪರಾಧಿತ್ವವನ್ನು ಮಲೇಷಿಯಾ ಸರಕಾರಕ್ಕೆ ಮನವರಿಕೆ ಮಾಡಿ ಆತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.