ಯುವಜನತೆ ಸ್ವಚ್ಛತೆ ಹಾಗೂ ಸ್ವಸಹಾಯದ ಬಗ್ಗೆ ಯಾವಾಗಲೂ ತೊಡಗಿಕೊಳ್ಳಬೇಕು. ಈ ಬಗ್ಗೆ ವಿದ್ಯಾರ್ಥಿದೆಸೆಯಿಂದಲೇ ಶಿಕ್ಷಕರು ಒಂದು ಬುನಾದಿಯನ್ನು ಸ್ವಸಹಾಯ ಚಿಂತನೆಯ ಕುರಿತು ಹಾಕಿ ಕೊಡಬೇಕು. ದೇಶವು ಅಭಿವೃದ್ಧಿ ಹೊಂದಬೇಕಾದರೆ ನಾವು ಉತ್ತಮ ಗುಣಗಳನ್ನು, ಉದಾತ್ತ ಚಿಂತನೆಗಳನ್ನು ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅವುಗಳನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗ ಮಾತ್ರ ನಮ್ಮ ದೇಶವು ಸುಭದ್ರವಾಗಿ ಮೂಡಿಬರಲು ಸಾಧ್ಯ ಎಂದು ಪುತ್ತೂರಿನ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಿ.ಡಿ. ಭಟ್ ಅವರು ಹೇಳಿದರು.
ಅವರು ಅಕ್ಷಯ ಕಾಲೇಜು ಪುತ್ತೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್ ಸಿ. ಅವರು ಮಾತನಾಡಿ ದೇಶದ ಪ್ರಗತಿಗೆ ನಾವು ತೊಡಗಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಶಿಕ್ಷಣ ಹಾಗೂ ಸಮಾಜ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ನಾವು ಶೈಕ್ಷಣಿಕವಾಗಿ ಮುಂದುವರಿಯುವ ಹಾಗೆ ಬಲಾಡ್ಯರಾಗಿ ಮುಂದುವರೆಯುವುದು ಕೂಡ ಈ ದೇಶಕ್ಕೆ ಅಗತ್ಯವಾಗಿದೆ ಎಂದು ಹೇಳಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಕ್ಷಯ ಕಾಲೇಜು ಅತ್ಯಂತ ಅವಕಾಶಗಳುಳ್ಳ ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್, ಬಿಕಾಂ ಎವಿಯೇಷನಂತಹ ಪದವಿಗಳ ಮೂಲಕ ವೃತ್ತಿಪರ ಶಿಕ್ಷಣವನ್ನು ಗಳಿಸುವಲ್ಲಿ ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡುವಂತಾಗಲಿ ಎಂದು ಅವರು ಶುಭ ಹಾರೈಸಿದರು.
ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಹಾಗೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಿ.ಡಿ. ಭಟ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪ್ರತಿಭಾ ಪ್ರೌಢಶಾಲೆ ಪಟ್ಟೆ ಇಲ್ಲಿನ ದೈಹಿಕ ಶಿಕ್ಷಕರಾದ ಮೋನಪ್ಪ ಅವರು ಹಾಗೂ ರಾಜ್ಯ ಪ್ರಶಸ್ತಿ ವಿಜೇತ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿಯ ದೈಹಿಕ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ, ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ತಾಲೂಕಿನ ಹೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರು ಈ ಸಮಾರಂಭದಲ್ಲಿ ಹಾಜರಿದ್ದರು.
ಸ್ವಯಂಸೇವಕಿ ಸ್ವರ್ಣ ಜ್ಯೋತ್ಸ್ನಾ ಮತ್ತು ಬಳಗವು ಪ್ರಾರ್ಥಿಸಿ,ಪ್ರಾಂಶುಪಾಲರಾದ ಸಂಪತ್ ಪಕ್ಕಳ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಉಪನ್ಯಾಸಕ ಕಿಶೋರ್ ಕುಮಾರ್ ರೈ ಅವರು ಸನ್ಮಾನಿತರನ್ನು ಪರಿಚಯಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರಿಯಾ ಅವರು ಧನ್ಯವಾದ ಸಲ್ಲಿಸಿ, ಸ್ವಯಂಸೇವಕಿ ಹರ್ಷಿತಾ ನಿರೂಪಿಸಿದರು.