ವಿಟ್ಲ : ವೀರಕಂಭ ಗ್ರಾಮ ಪಂ.ವ್ಯಾಪ್ತಿಯ ಬೆಂಜಂತಿಮಾರು ಭಂಡಾರದ ಚಾವಡಿಗೆ ಹೋಗುವ ದಾರಿಯ ಹೈಮಾಸ್ಕ್ ಲೈಟ್ ಕಂಬದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜ ತೆರವು ಪ್ರಕರಣದ ಸತ್ಯಾಂಶ ಬಯಲಾಗುವಂತೆ ದೈವದ ಮುಂದೆ ಕಾಂಗ್ರೆಸ್ ಮುಖಂಡರು ಪ್ರಾರ್ಥನೆ ಮಾಡಿದರು.
ಸರಕಾರದ ಲೈಟ್ ಕಂಬದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜದ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ಪಂ.ಪಿಡಿಒ ಮತ್ತು ಗ್ರಾಮಕರಣಿಕರು ತೆರವು ಮಾಡಿದ್ದರು. ಬಿಜೆಪಿ ಆಡಳಿತವಿರುವ ವೀರಕಂಭ ಗ್ರಾ.ಪಂ.ನಲ್ಲಿ ಆಡಳಿತ ಪಕ್ಷದವರಿಗೆ ಅರಿಯದೇ ಸಿಬ್ಬಂದಿಗಳು ಧ್ವಜ ತೆರವು ಮಾಡಲು ಸಾಧ್ಯವೇ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ. ಅಲ್ಲದೇ ಇಂತಹ ಸೂಕ್ಷ್ಮ ವಿಚಾರಗಳನ್ನು ಆಡಳಿತ ಪಕ್ಷದವರಲ್ಲಿ ಸಮಾಲೋಚಿಸದೇ ಏಕಾಏಕಿ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಲು ಸಾಧ್ಯವೇ ಎಂದು ಸುದೀಪ್ ಕುಮಾರ್ ಪ್ರಶ್ನಿಸಿದರು.
ತಮ್ಮ ಎಡವಟ್ಟಿನಿಂದಾಗಿ ಸಾರ್ವಜನಿಕರೆದುರು ಮಾನ ಹೋಗುವುದನ್ನು ಮರೆಮಾಚಲು ಕಾಂಗ್ರೆಸ್ ಸದಸ್ಯ ರಘು ಪೂಜಾರಿಯವರ ಹೆಸರು ದುರ್ಬಳಕೆ ಮಾಡಿ ಪುಕ್ಸಟ್ಟೆ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇದೀಗ ಕೆಲವೊಂದು ವ್ಯಕ್ತಿಗಳು ಸಂಘಟನೆಯ ಹೆಸರಲ್ಲಿ ಪ್ರಚಾರ ಪಡೆಯಲು ನರಳಾಡುತ್ತಿರುವುದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿದೆ ಎಂದು ಶೆಟ್ಟಿ ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಂಶ ಬಯಲಾಗುವಂತೆ ಹಾಗೂ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡುವಂತೆ ದೈವದ ಮುಂದೆ ಬೆಂಜಂತಿಮಾರು ಗುತ್ತಿನ ಧರ್ಮಚಾವಡಿಯ ಆಡಳಿತ ಮುಕ್ತೇಸರರಾದ ಗಿರಿಧರ ರೈಯವರ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂ. ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ವೀರಕಂಭ ವಲಯ ಕಾಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪಂ.ಸದಸ್ಯ ರಘುಪೂಜಾರಿ ಮಂಗಲಪದವು, ವಸಂತ ಪೂಜಾರಿ ಕೆಲಿಂಜ, ಹರೀಶ್ ಶೆಟ್ಟಿ ಕೆಲಿಂಜ ಮತ್ತು ಮಂಗಲಪದವು ಸಂದೀಪ್ ಉಪಸ್ಥಿತರಿದ್ದರು.