ವೇಣೂರು: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ(60) ಎನ್ನಲಾಗಿದೆ.
ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಕರಿಮಣೇಲು ನೂಯಿ ನಿವಾಸಿ ಶ್ರೀಷಾ(36) ಎಂದು ಗುರುತಿಸಲಾಗಿದೆ.
ಆರೋಪಿ ಶ್ರೀಷಾ ಮತ್ತು ಸಂಜೀವ ಶೆಟ್ಟಿ ನಡುವೆ ಜಾಗದ ವಿಷಯವಾಗಿ ಜಗಳ ನಡೆದಿದ್ದು, ಜಗಳದ ಬಳಿಕ ಸಂಜೀವ ಶೆಟ್ಟಿಯ ಮಾವನ ಮಗ ಶ್ರೀಷ ಶೆಟ್ಟಿಯೇ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಆರೋಪಿಯ ಜಾಡು ಹಿಡಿದ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್ ನೇತೃತ್ವದ ಪೋಲೀಸರ ತಂಡ, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಉಜಿರೆ ಸಮೀಪದ ಸೋಮಂದಡ್ಕ ಅಂಗಡಿಯ ಬಳಿ ವಶಕ್ಕೆ ಪಡೆದಿದ್ದಾರೆ.
ಘಟನೆ ಬಗ್ಗೆ ವೇಣೂರು ಠಾಣೆಯಲ್ಲಿ ಅ.ಕ್ರ. 63/2021 ಕಲಂ: 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.