ಬೆಂಗಳೂರು: ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಕಳೆದ ಸಾಲಿನಲ್ಲಿ ಬೇರೆ ಬೇರೆ ವಿಶ್ವ ವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. 2021- 22ನೇ ಸಾಲಿಗೂ ಸೇವೆ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಇದ್ದವರನ್ನು ಒಂದು ದಿನದ ಮಟ್ಟಿಗೆ ಸೇವೆಯಿಂದ ಬಿಡುಗಡೆಗೊಳಿಸಿ ಪುನಃ ಸೇವೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈ ಮೊದಲು ಸಲಹೆ ನೀಡಿದ್ದರು. ಅಂದಿನ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಿಗೆ ಪತ್ರ ಬರೆದಿದ್ದರು. ಕಳೆದ 2 ವರ್ಷಗಳಿಂದ ಕೊರೊನಾ ಹಿನ್ನೆಲೆ ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.ಅತಿ ಕಡಿಮೆ ವೇತನ ಮತ್ತು ಸೇವಾ ಭದ್ರತೆ ಇಲ್ಲದ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಸೂಚಿಸಿದ್ದರು.
ಈಗಾಗಲೇ ಕಡಿಮೆ ವೇತನ ಮತ್ತು ಭದ್ರತೆ ಇಲ್ಲದ ಕಾರಣ ರಾಜ್ಯದಲ್ಲಿ ಹಲವಾರು ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲ್ಲಾ ವಿದ್ಯಾರ್ಹತೆ ಹೊಂದಿ, ಹಲವು ವರ್ಷಗಳ ಅನುಭವ ಅತಿಥಿ ಉಪನ್ಯಾಸಕರಿಗಿದೆ. ಹಲವಾರು ಜನ ವಯೋವಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿದ್ದಾರೆ ಎಂದು ವಿವರಿಸಿದ್ದರು.
ಇವರಂತೆಯೇ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ, ಸ್ಟಾಪ್ ಗ್ಯಾಪ್, ಗುತ್ತಿಗೆ ಆಧಾರಿತ, ಅರೆಕಾಲಿಕ ಉಪನ್ಯಾಸಕರುಗಳನ್ನು ಸರ್ಕಾರ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಅಂಥವರನ್ನ 1982, 1992, 1996 ಮತ್ತು 2003ರಲ್ಲಿ ಖಾಯಂ ಮಾಡಿರುವ ಉದಾಹರಣೆಗಳಿವೆ. ಅದೇ ಮಾದರಿಯಲ್ಲಿ ಈಗ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನ ಖಾಯಂಗೊಳಿಸಿ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸುವಂತೆ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗೆ ಪತ್ರದ ಬರೆದಿದ್ದರು.