ವಿಟ್ಲ: ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರಿನ ಕಮ್ಯುನಿಟಿ ಹಾಲ್ ಬಳಿ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದ ಅಪರಿಚಿತ ವಾಹನ ಪರಾರಿಯಾಗಿದ್ದು, ವಾಹನ ಸವಾರ ತೀವ್ರ ರೀತಿಯ ಗಾಯಗೊಂಡು ಮೃತ ಪಟ್ಟ ಘಟನೆ ನಡೆದಿದೆ.
ದ್ವಿಚಕ್ರ ವಾಹನದ ಸವಾರ ನಿಡ್ಪಳ್ಳಿ ನಿವಾಸಿ ಸುರೇಶ್ ನಾಯ್ಕ ಆರ್. (43) ಮೃತರೆಂದು ಗುರುತಿಸಲಾಗಿದೆ. ರಿಬ್ಕೋ ಟ್ರೇಡಿಂಗ್ ಕಂಪನಿಯ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುವ ಬಗ್ಗೆ ವಾಹನದಲ್ಲಿ ಸಿಕ್ಕ ದಾಖಲೆಗಳಿಂದ ತಿಳಿದು ಬಂದಿದೆ.
ಅಪರಿಚಿತ ವಾಹನದ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಬಿದ್ದು, ಮುಖದ ಭಾಗ ಸಂಪೂರ್ಣ ಜಜ್ಜಿದ ತೀವ್ರ ರೀತಿಯ ಗಾಯಗೊಂಡಿದ್ದರು. ಗಾಯಾಳುವನ್ನು ಕಾರಿನಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸುವ ಸಂದರ್ಭ ಮೃತಪಟ್ಟಿರುವುದು ದೃಢ ಪಟ್ಟಿದ್ದರು ಎಂದು ಮೊದಲು ಗಾಯಾಳುವನ್ನು ನೋಡಿದ ವ್ಯಕ್ತಿ ವಿಟ್ಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಪಘಾತ ನಡೆಸಿ, ಚಿಕಿತ್ಸೆಯನ್ನು ಕೊಡದೆ ವಾಹನ ಸಹಿತ ಪಲಾಯನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






























