ಬೆಂಗಳೂರು: ಹೆಲ್ಮೆಟ್ ಧರಿಸಿ ಸಂಬಂಧಿಕರ ಮನೆಯಲ್ಲಿ ಕಳ್ಳತನಗೈದಿದ್ದ ಗುತ್ತಿಗೆದಾರನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ನಿವಾಸಿ ಶ್ರೀನಿವಾಸ್(46) ಬಂಧಿತ ಗುತ್ತಿಗೆದಾರ. ಆತನಿಂದ ಹತ್ತು ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ನಗರದಲ್ಲಿ ಗುತ್ತಿಗೆದಾರನಾಗಿರುವ ಆರೋಪಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಬಹಳಷ್ಟು ಬ್ಯಾಂಕ್, ಫೈನಾನ್ಸ್ ನಲ್ಲಿ ಸಾಲಕ್ಕೆ ಯತ್ನಿಸಿದರೂ ಹಣ ಸಿಕ್ಕಿರಲಿಲ್ಲ. ಹೀಗಾಗಿ ಸಂಬಂಧಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಇಟ್ಟಿರುವ ಮಾಹಿತಿ ಪಡೆದುಕೊಂಡಿದ್ದ ಆರೋಪಿ, ಸೆ.30 ರಂದು ಸಂಬಂಧಿ ಮನೆ ಸಮೀಪದಲ್ಲಿ ಅವಿತುಕೊಂಡು ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದು, ಅವರ ದಿನಚರಿಗಳ ಬಗ್ಗೆಯೂ ತಿಳಿದುಕೊಂಡಿದ್ದ ಎನ್ನಲಾಗಿದೆ.
ಸೆ.30 ರಂದು ಸಂಬಂಧಿಯ ಪತ್ನಿ ಸಂಜೆ ಯೋಗ ತರಗತಿಗೆ ಹೋಗಲು ಮನೆ ಬೀಗ ಹಾಕಿ ಹೂ ಕುಂಡದಲ್ಲಿ ಇಟ್ಟಿದ್ದರು. ಈ ವಿಚಾರ ಮೊದಲೇ ತಿಳಿದುಕೊಂಡಿದ್ದ ಆರೋಪಿ, ಆ ಮಹಿಳೆ ಹೊರಗಡೆ ಹೋಗುತ್ತಿದ್ದಂತೆ ಹೆಲ್ಮೆಟ್ ಧರಿಸಿ ಕೀ ತೆಗೆದುಕೊಂಡು ಮನೆಯೊಳಗೆ ಹೋಗಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ.
ಮಹಿಳೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮೆರಾ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.