ವಿಟ್ಲ: ಭಾರತೀಯ ಮಜ್ದೂರ್ ಸಂಘದ ನೂತನ ತಾಲೂಕು ಸಮಿತಿ ರಚನೆ ಆಗಿ ಒಂದು ತಿಂಗಳೊಳಗೆಯೇ
ನೂತನ ಕಚೇರಿ ಉದ್ಘಾಟನೆಗೊಂಡಿತು.
ವಿಜಯದಶಮಿಯ ಶುಭದಿನವಾದ ಇಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಜಗನ್ನಾಥ ಸಾಲ್ಯಾನ್ ರವರು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಕಟ್ಟಡದಲ್ಲಿ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ವತಿಯಿಂದ ಕಂಪ್ಯೂಟರ್ ಹಾಗೂ ಪ್ರಿಂಟರನ್ನು ನಿರ್ದೇಶಕರ ಸಮ್ಮುಖದಲ್ಲಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಬಿಎಂಎಸ್ ನ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ಸಂಘಟನೆ ಬೆಳೆದು ಬಂದ ಹಾದಿ ಹಾಗೂ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಮಾತನಾಡಿದರು. ಬಿಎಂಎಸ್ ರಾಜ್ಯ ಮುಖ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರ ನೀಡಿದರು. ಕಚೇರಿಗೆ ಸಹಾಯ ಮಾಡಿದವರನ್ನು ಸ್ಮರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ವಿನೋದ್ ಅಡ್ಕಸ್ಥಳ ಸಂಘಟನೆಯ ಉದ್ದೇಶ ಹಾಗೂ ಶ್ರಮಿಕರು ಒಟ್ಟು ಸೇರುವುದರಿಂದ ಸಮಾಜಕ್ಕೆ ಆಗುವ ಲಾಭಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಬಿಎಂಎಸ್ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಕಿರಣ್ ರಾವ್, ಕಾರ್ಯದರ್ಶಿ ಗೋಪಾಲಕೃಷ್ಣ, ವಿಟ್ಲ ತಾಲೂಕು ಅಧ್ಯಕ್ಷ ರಾಜೇಶ್ ಬೊಬ್ಬೆಕೇರಿ ಉಪಸ್ಥಿತರಿದ್ದರು. ತುಳಸಿದಾಸ್ ಶೆಣೈ ಪ್ರಾರ್ಥಿಸಿದರು, ಕೋಶಾಧಿಕಾರಿ ವಿಶ್ವನಾಥ್ ನಾಯ್ತೊಟ್ಟು ಸ್ವಾಗತಿಸಿದರು, ಜಯಪ್ರಸಾದ್ ಕೆಲಿಂಜ ವಂದಿಸಿದರು, ಹರೀಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಕೆಲಿಂಜ ಹಾಗೂ ನಾಗೇಶ್ ಸೇರಾಜೆ ಸಹಕರಿಸಿದರು. ತಾಲೂಕು ವ್ಯಾಪ್ತಿಯ ಕಾರ್ಮಿಕರು, ಜನಪ್ರತಿನಿಧಿಗಳು, ಸಹಕಾರಿ ಸಂಸ್ಥೆಯ ನಿರ್ದೇಶಕರುಗಳು ಉಪಸ್ಥಿತರಿದ್ದರು.