ಉಳ್ಳಾಲ: ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರು ಬಿಜೆಪಿಯ ಮಾಜಿ ಗ್ರಾ.ಪಂ. ಸದಸ್ಯನ ಮೇಲೆ ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಅ.18 ರ ರಾತ್ರಿ ನಡೆದಿದೆ.
ಬಿಜೆಪಿ ಕಾರ್ಯಕರ್ತ , ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ ಬಿದ್ದಿದೆ. ಗಾಯಾಳು ಪ್ರಕಾಶ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕಾಶ್ ರವರು ಪರಿಚಯಸ್ಥ ಮಂಜುನಾಥ್ ಎಂಬವರ ಬೈಕ್ ನಲ್ಲಿ ಹೊರಟಾಗ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಪ್ರಕಾಶ್ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ. ತಲವಾರು ಏಟನ್ನು ತಪ್ಪಿಸಲು ಯತ್ನಿಸಿದಾಗ ಇವರ ಬೈಕ್ ಉರುಳಿ ಬಿದ್ದಿದ್ದು, ಕೂಡಲೇ ಬೈಕ್ ಸವಾರ ಹಾಗೂ ಪ್ರಕಾಶ್ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ. ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದೆ. ಈ ಬಗ್ಗೆ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.




























