ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಾಲಯದ ಅಷ್ಠಬಂಧ ಬ್ರಹ್ಮಕಲಶವು ಡಿ.21 ರಿಂದ 26 ರ ತನಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಎಸ್.ಹೇಳಿದರು.

ಬ್ರಹ್ಮಕಲಶದ ಹಿನ್ನೆಲೆಯಲ್ಲಿ ದೇವಾಲಯದ ವಠಾರದಲ್ಲಿ ಅ.24 ರಂದು ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವಿರೇಂದ್ರ ಹೆಗ್ಗಡೆ, ರಾಜ್ಯ, ಕೇಂದ್ರ ಸರಕಾರದ ಸಚಿವರುಗಳು, ಸ್ವಾಮೀಜಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಉಡುಪಿಯ ಕುಮಾರ ತಂತ್ರಿ ಅವರ ಮುಖೇನ ದೇವಾಲಯದಲ್ಲಿ ಪ್ರಶ್ನಾಚಿಂತನೆ ನಡೆಸಿದ್ದು ಅದರಲ್ಲಿ ಕಂಡು ಬಂದ ಪ್ರಕಾರ ಪೂಜೆ ಪುನಸ್ಕಾರಗಳು ನಡೆದು ಬ್ರಹ್ಮಕಲಶಕ್ಕೆ ದಿನ ನಿಗದಿಪಡಿಸಲಾಗಿದೆ ಎಂದರು.
ಈ ಹಿಂದೆ ನಿರ್ಧರಿಸಿದಂತೆ ಭಜನಾಮೃತ ಕಾರ್ಯಕ್ರಮ-ಭಜಕರ ಸಮಾವೇಶ ಈ ಬಾರಿಯು ನಡೆಯಲಿದ್ದು ಆಯೋಜನೆಯ ರೂಪುರೇಷೆದ ಬಗ್ಗೆ ಕೆಲ ದಿನಗಳಲ್ಲಿಯೇ ಸಭೆ ನಡೆಸಿ ನಿರ್ಧರಿಸಲಾಗುವುದು.
ಮಂಗಳೂರಿನ ದಸರಾ ಮಾದರಿಯಲ್ಲೇ ಕ್ಷೇತ್ರದ ಸಂಪರ್ಕ ರಸ್ತೆಗಳಲ್ಲಿ ಬೀದಿ ಬದಿ ಅಲಂಕಾರ ನಡೆಯಲಿದೆ ಎಂದರು. ಕ್ಷೇತ್ರಕ್ಕೆ ಭಕ್ತರು ಬರುವ ಸಲುವಾಗಿ ಕೆಎಸ್‌ಆರ್‌ಟಿಸಿ ಬಸ್ ಅನ್ನು ಬಳಸಿಕೊಳ್ಳಲಾಗುವುದು. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮಲು ಜತೆಗೆ ಚರ್ಚಿಸಿದ್ದು ಅವರು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೋಶಾಧಿಕಾರಿ ನಿರಂಜನ ರೈ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ್ ನಿಡ್ಯ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕ ಜಯಪ್ರಕಾಶ್ ಬದಿನಾರು, ಆರ್ಥಿಕ ಸಮಿತಿ ಸಂಚಾಲಕ ರಾಜೀವ ಶೆಟ್ಟಿ ಕೇದಗೆ ಮೊದಲಾದವರು ಉಪಸ್ಥಿತರಿದ್ದರು.