ಮಲವಂತಿಕೆ: ಇಲ್ಲಿಯ ಎಳನೀರು ಬಂಗಾರಪಲ್ಕೆ ಎಂಬಲ್ಲಿ ಜಲಪಾತದಲ್ಲಿ ಯುವಕರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಬಿದ್ದ ಘಟನೆ ನಿನ್ನೆ ಜ.25 ರಂದು ಸಂಜೆ ನಡೆದಿತ್ತು.ಗುಡ್ಡ ಕುಸಿದು ಬಿದ್ದ ಸಂದರ್ಭದಲ್ಲಿ ಸ್ಥಾನ ಮಾಡುತ್ತಿದ್ದ ನಾಲ್ವರು ಯುವಕರಲ್ಲಿ ಉಜಿರೆಯ ಓರ್ವ ಯುವಕ ಮಣ್ಣಿನಡಿಯಲ್ಲಿ ಹೂತು ಹೋಗಿ ನಾಪತ್ತೆಯಾಗಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಉಜಿರೆಯ ಕಾಶಿಬೆಟ್ಟಿನ ಯುವಕ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ಆತ ಬದುಕಿರುವ ಸಾಧ್ಯತೆ ಇದೀಗ ಅತ್ಯಂತ ಕ್ಷೀಣವಾಗಿದೆ. ಮಣ್ಣಿನಡಿ ಸಿಲುಕಿದ ಯುವಕನನ್ನು ಹೊರತೆಗೆಯಲು ಕಾರ್ಯಚರಣೆ ಬೃಹತ್ ಕಾರ್ಯಾಚರಣೆಯೇ ನಡೆಯುತ್ತಿದ್ದು, ಯುವಕನ ಪತ್ತೆಗೆ ಬೃಹತ್ ಬಂಡೆಗಳು ಹಾಗೂ ಕೆಸರು ಅಡ್ಡಿಯಾಗಿದ್ದು, ಎಸ್.ಡಿ.ಆರ್.ಎಫ್, ಪೋಲಿಸ್ ಸಿಬ್ಬಂದಿಗಳು, ಅಗ್ನಿಶಾಮಕದಳದವರು ಹಾಗೂ ಸ್ಥಳೀಯರು ಸೇರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಕಾರ್ಯಾಚರಣೆಗೆ ಕಷ್ಟವಾಗುತ್ತಿದೆ. ಎಲ್ಲಾ ಸಿಬ್ಬಂದಿ, ಪೊಲೀಸರು ಸಾರ್ವಜನಿಕರು ಮತ್ತು ಸ್ವಯಂ ಸೇವಕರು ಮೈಕೈ ಕೆಸರು ಮಾಡಿಕೊಂಡು ತೆರವು ಕಾರ್ಯದಲ್ಲಿ ತೊಡಗಿದ್ದರೂ ಮಾಡಬೇಕಿರುವ ಕೆಲಸದ ಮುಂದೆ ಅದು ಇನ್ನೂ ಪ್ರಾಥಮಿಕ ಹಂತ ಎನ್ನಲಾಗುತ್ತಿದೆ.
ಅದಲ್ಲದೆ ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗದೆ ಇರುವುದರಿಂದ ಕಾರ್ಯಚರಣೆಗೆ ಕಷ್ಟವಾಗಿದೆ. ಹಿಟಾಚಿ ಅಲ್ಲಿಗೆ ಸಾಗುವಂತಿದ್ದರೆ ಕಾರ್ಯಾಚರಣೆ ನಡೆಸಿ ಮಣ್ಣಿನ ಒಳಗಿನಿಂದ ಹೂತು ಹೋದ ವ್ಯಕ್ತಿಯನ್ನು ತೆಗೆಯಬಹುದಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ ಇವತ್ತಿನ ಪರಿಸ್ಥಿಯನ್ನು ನೋಡಿದರೆ, ಮಣ್ಣಿನಡಿಯಿಂದ ದೇಹ ತೆರವು ಸಾಧ್ಯತೆ ಕೂಡಾ ಕ್ಷೀಣ ಎಂದೇ ಹೇಳಲಾಗುತ್ತಿದೆ.ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಸಮಗ್ರ ಮಾಹಿತಿ ಪಡೆದರು. ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ, ಎಸೈ ನಂದಕುಮಾರ್ ಅವರು ಮತ್ತು ಎಸ್.ಡಿ.ಆರ್.ಎಫ್ ತಂಡದ ಕಾರ್ಯಾಚರಣೆ ನಡೆಯುತ್ತಿದೆ.