ಧರ್ಮಸ್ಥಳ: ಖಾಸಗಿ ಜಾಗದಲ್ಲಿ ಹಾದುಹೋಗುವ ಮೃತ್ಯುಂಜಯ ನದಿಯಲ್ಲಿ ಅಕ್ರಮವಾಗಿ ಅನೇಕ ಸಮಯಗಳಿಂದ ಮರಳುಗಾರಿಗೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಎಎಸ್ ಪಿ ಮತ್ತು ತಂಡ ಮಫ್ತಿಯಲ್ಲಿ ದಾಳಿ ನಡೆಸಿದ ಘಟನೆ ಅ.3 ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಎಂಬಲ್ಲಿ ನಡೆದಿದೆ.
ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿಯಲ್ಲಿ ಒಂದು ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಕಡೆ ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಚಾರ್ಮಾಡಿ, ಮುಂಡಾಜೆ,ಕಲ್ಮಂಜ, ಕಡಿರುದ್ಯಾವರ, ಮಲವಂತಿಗೆ, ಮಿತ್ತಬಾಗಿಲು ಮೊದಲಾದ ಪ್ರದೇಶಗಳಲ್ಲಿ ಹರಿಯುವ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳಿಂದ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಅನೇಕ ಬಾರಿ ದೂರು ನೀಡಿದ್ದರು.
ರಾತ್ರಿ ಬೆಳಗಿನ ಜಾವ ಸಾಕಷ್ಟು ಮರಳು ಸಾಗಾಟ ನಡೆಯುತ್ತಿದೆ. ನದಿಯ ಬದಿಯಲ್ಲಿ ಬಿದ್ದಿರುವ ಮರಳು ತೆರವುಗೊಂಡರೆ ಕೃಷಿಕರಿಗೆ ಅನುಕೂಲ.ಆದರೆ ಈಗ ಇಲಾಖೆಗಳಿಗೆ ಯಾವುದೇ ರೀತಿಯ ಸುಂಕ ಪಾವತಿಸದೆ ಕಳ್ಳ ಹಾದಿಗಳಲ್ಲಿ ತೆರವುಗೊಳ್ಳುತ್ತಿದ್ದು, ಇದಕ್ಕೆ ತಡೆಯೊಡ್ಡಿ ಮರಳು ನೀತಿ ರೂಪಿಸಿ ತೆರವುಗೊಳಿಸಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
































