ಸುಳ್ಯ: ಗಾಂಧಿನಗರದಲ್ಲಿರುವ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ತೆಗೆಯುತ್ತಿದ್ದ ವೇಳೆ ಗೋಡೆ ಮಗುಚಿ ಬಿದ್ದು, ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ಖಾದರ್(48) ರವರು ಮೃತಪಟ್ಟ ಘಟನೆ ನ.5 ರಂದು ನಡೆದಿದೆ.
ಅಬ್ದುಲ್ ಖಾದರ್ ರವರು ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜುರಿ ವ್ಯಾಪಾರ ನಡೆಸುತ್ತಿದ್ದು, ಹಳೆ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ ಕಳೆದ ಕಳೆದ ವರ್ಷಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದರು.
ತಮ್ಮ ಕೆಲಸದಾಳುಗಳ ಜೊತೆ ಇಂದು ಬೆಳಿಗ್ಗೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆಯು ಮಗುಚಿ ಅಬ್ದುಲ್ ಖಾದರ್ ರವರ ಮೇಲೆ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮೃತದೇಹವನ್ನು ಪೋಸ್ಟ್ಮಾರ್ಟ್ಮ್ಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.





























