ಮಡಿಕೇರಿ: ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಚೋರನನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಸೈಯದ್ ಗೌಸ್ ಎಂಬಾತ ಬಂಧಿತ ಆರೋಪಿ. ಆತನಿಂದ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 1 ಮೊಬೈಲ್ ಫೋನ್ ಹಾಗೂ 1 ಲಕ್ಷಕ್ಕೂ ಅಧಿಕ ಮೌಲ್ಯದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆ, ಕಾವೇರಿ ಬಡಾವಣೆಯಲ್ಲಿ 2 ಮನೆ ಕಳ್ಳತನ ಹಾಗೂ ದಂಡಿನಪೇಟೆಯಲ್ಲಿ 1 ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಸೈಯದ್ ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಪೈಂಟಿಂಗ್ ಕೆಲಸಕ್ಕೆಂದು ಆಗಾಗ್ಗೆ ಬರುತ್ತಿದ್ದ. ಪಟ್ಟಣದಲ್ಲಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಕಳ್ಳತನ ಮಾಡುವುದು ಆತನ ಚಾಳಿ ಆಗಿತ್ತು.
ನ. 10 ರಂದು ರಾತ್ರಿ ಗಸ್ತಿನಲ್ಲಿದ್ದ ಕುಶಾಲನಗರ ಎಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿ ಅರುಣಕುಮಾರ್ ವಾಹನ ತಪಾಸಣೆ ವೇಳೆ ಈತನ ಬಗ್ಗೆ ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ವಾಹನದಲ್ಲಿ ಮನೆ ಕಳ್ಳತನ ಮಾಡಲು ಬಳಸುವ ಆಯುಧ ಕಂಡು ಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕುಶಾಲನಗರದ 3 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಯಿಂದ 59.15 ಗ್ರಾಂ ಚಿನ್ನದ ಒಡವೆಗಳು, ಹೋಂಡಾ ಆ್ಯಕ್ಟಿವಾ ಸ್ಕೂಟರ್, ಯಮಹಾ ಸ್ಕೂಟರ್ ಮತ್ತು 1 ಆ್ಯಪಲ್ ಐಫೋನ್ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.