ಉಡುಪಿ: ದಲಿತರ ಮನೆಗೆ ಪೇಜಾವರ ಶ್ರೀಗಳು ತೆರಳಿದ್ದನ್ನು ಟೀಕಿಸಿರುವ ಹಂಸಲೇಖ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥಶ್ರೀ ಅವರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದು,ಹಂಸಲೇಖ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾಡುತ್ತಾರೆ ಎಂದು ಹೇಳಿದರು.
ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ ಎಂದು ಪೇಜಾವರ ಶ್ರೀಗಳ ದಲಿತ ಕೇರಿಗೆ ಭೇಟಿಯನ್ನು ಟೀಕಿಸಿದ್ದ ಹಂಸಲೇಖ ಅವರ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಇಂತಹ ಮಾತು ಹಂಸಲೇಖ ಬಾಯಿಂದ ಬರಬಾರದಿತ್ತು. ಸಮಾಜದಲ್ಲಿ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆ ಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು.
ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ ಎಂದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ, ದಲಿತರು ನಮ್ಮಿಂದ ಹೊರತಲ್ಲ.
ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.