ವಿಟ್ಲ: ಏಳು ವರ್ಷಗಳ ಹಿಂದೆ ದಲಿತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ಒಂದನೇ ತ್ವರಿತ ಸೆಷನ್ಸ್ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ.
ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿವಾಸಿ ನಿತಿನ್(27)ಎನ್ನಲಾಗಿದೆ.
ನಿತಿನ್ ಗೆ ಏಳು ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ.
ಬಾಲಕಿಯ ಅಪಹರಣ ಕೃತ್ಯಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಕಠಿಣ ಶಿಕ್ಷೆ, ಅತ್ಯಾಚಾರ ಎಸಗಿದ್ದಕ್ಕೆ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 2 ತಿಂಗಳ ಕಠಿಣ ಸಜೆ ಎಂದು ತೀರ್ಪು ನೀಡಿದೆ.
ಮಂಗಳೂರಿನ ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಭಟ್ ವಿಚಾರಣೆ ನಡೆಸಿ ನಿತಿನ್ ತಪ್ಪಿತಸ್ಥ ಎಂದು ಘೋಷಿಸಿದ್ದು, ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದರು.
ನಿತಿನ್ ವೃತ್ತಿಯಲ್ಲಿ ಖಾಸಗಿ ಬಸ್ ಕಂಡಕ್ಟರ್ ಆಗಿದ್ದು, ಬಸ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯ ಪರಿಚಯವಾಗಿದ್ದು, ಬಳಿಕ 2014 ಜುಲೈ 24ರಂದು ಆತ ಆಕೆಯನ್ನು ಪುತ್ತೂರಿಗೆ ಬರುವಂತೆ ಹೇಳಿ ಅದರಂತೆ ಬಾಲಕಿ ಕಾಲೇಜಿಗೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದಳು. ಹಾಗೆ ಪುತ್ತೂರಿನಲ್ಲಿ ಇಬ್ಬರೂ ಭೇಟಿಯಾಗಿ ಆತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೊದಲು ಕಟೀಲಿಗೆ ಹಾಗೂ ಬಳಿಕ ಅಲ್ಲಿಂದ ಮಂಗಳೂರಿಗೆ ಕರೆದೊಯ್ದು ರಾತ್ರಿ ವೇಳೆ ಕೆ ಎಸ್ ಆರ್ ಟಿಸಿ ಸ್ಲೀಪರ್ ಬಸ್ಸಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.