ಮಂಗಳೂರು: ಹಳೆಯ ಕೊಲೆಯ ವೈಷಮ್ಯಕ್ಕೆ ಯುವಕನೋರ್ವನ ಕೊಲೆ ಯತ್ನ ನ.30 ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೌಡಿಗಳ ತಂಡದ ಗ್ಯಾಂಗ್ ವಾರ್ ನಲ್ಲಿ ಶ್ರವಣ್ ಎಂಬ ಯುವಕನ ಮೇಲೆ 8 ಜನರ ತಂಡವೊಂದು ಮಾರಣಾಂತಿಕ ದಾಳಿ ನಡೆಸಿದೆ. ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ.
2020ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಇಂದ್ರಜಿತ್ ಎಂಬಾತನ ಕೊಲೆ ಪ್ರಕರಣದ ಸೇಡಿಗಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.ಈ ಕೊಲೆಯನ್ನು ತಲವಾರು ಜಗ್ಗ ಎಂಬಾತನ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು. ಅಳಕೆ ಗ್ಯಾಂಗ್ ತಂಡದ 8 ಮಂದಿ ರೌಡಿಗಳು ಈ ಕೃತ್ಯ ಎಸಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡಿರುವಾತ ಅಂಕಿತ್ ಎಂಬಾತನ ಸ್ನೇಹಿತ. ಅಂಕಿತ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಓರ್ವನ ಸಹೋದರನಾಗಿದ್ದ. ಆರಂಭದಲ್ಲಿ ಇದೊಂದು ಕೊಲೆ ಯತ್ನದ ಕೃತ್ಯವೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಇದೊಂದು ಗ್ಯಾಂಗ್ ವಾರ್ ಎನ್ನುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.