ಬೆಂಗಳೂರು: ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಬಂದ ಮೂರ್ನಾಲ್ಕು ಯುವಕರು ಪಿಸ್ತೂಲ್ ತೋರಿಸಿ ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿ ಪರಾರಿಯಾದ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್.ಬಿ.ಎಂ ಕಾಲೋನಿಯಲ್ಲಿ ನಡೆದಿದೆ.
ಕಾಲೋನಿಯ ನಿವಾಸಿ ಸಂಪತ್ ಸಿಂಗ್ ತಾಯಿ ಹಾಗೂ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ಕಾರು ಹಾಗೂ ಬೈಕಿನಲ್ಲಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ರೂಪಾಂತರಿ ಕೋವಿಡ್ಗೆ ವ್ಯಾಕ್ಸಿನೇಷನ್ ಹಾಕುವುದಾಗಿ ಮನೆಯೊಳಗೆ ಬಂದು ಪಿಸ್ತೂಲ್ ತೋರಿಸಿ 50ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪಕ್ಕಾ ಪ್ಲಾನ್ ಮಾಡಿ ಎಂಟ್ರಿ ಕೊಟ್ಟಿದ್ದ ಆರೋಪಿಗಳು..
ಪಕ್ಕಾ ಫ್ಲ್ಯಾನ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದ ಮೂವರು ಆರೋಪಿಗಳು ವೈದ್ಯಕೀಯ ಸಿಬ್ಬಂದಿಯಂತೆ ವೈಟ್ ಡ್ರೆಸ್ ಧರಿಸಿ 1 ಕಾರು ಹಾಗೂ 1 ಬೈಕಿನಲ್ಲಿ ಮನೆ ಬಳಿ ಬಂದಿದ್ರು. ಆ ಬಳಿಕ ಮನೆಗೆ ಬಂದು ಹೊಸ ತಳಿಯ ಕೋವಿಡ್ಗೆ ವ್ಯಾಕ್ಸಿನೇಷನ್ ಹಾಕಲು ಬಂದಿದ್ದೇವೆ ಎಂದಿದ್ರು. ಆಗ ಸಂಪತ್ ಸಿಂಗ್ ಪತ್ನಿ ಮನೆಯಲ್ಲಿ ಯಾರೂ ಇಲ್ಲ ಎಂದು ಗಂಡನಿಗೆ ಫೋನ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಅವರ ಹಣೆಗೆ ಪಿಸ್ತೂಲ್ ಇಟ್ಟ ಖದೀಮರು ಅತ್ತೆ-ಸೊಸೆ ಇಬ್ಬರನ್ನೂ ರೂಮಿನಲ್ಲಿ ಕೂಡಿ ಹಾಕಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕೃತ್ಯದ ವೇಳೆಯಲ್ಲಿ ಮನೆಯ ಬಳಿ ಬಂದಿದ್ದ ಸಂಪತ್ ಹಿರಿಯ ಮಗ ವಿಕ್ರಂ ಸಿಂಗ್ ಮನೆ ಕೆಳಗಡೆ ನಿಂತು ತಾಯಿಯನ್ನ ಕರೆದಿದ್ದಾರೆ. ಇದರಿಂದ ಅಲರ್ಟ್ ಆದ ಕಳ್ಳರು ವಿಕ್ರಂ ಸಿಂಗ್ ಬಳಿ ನಯವಾಗಿ ನಿಮ್ಮದು ವ್ಯಾಕ್ಸಿನೇಷನ್ ಆಗಿದ್ಯಾ ಎಂದು ಕೇಳಿ ಹೊರ ನಡೆದಿದ್ದಾರೆ. ಆ ಬಳಿಕ ವಿಕ್ರಂ ಮನೆಯ ಒಳಗಡೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಕರಿತು ಸದ್ಯ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.