ಮಂಗಳೂರು: ಪ್ರೊ ಕಬಡ್ಡಿ ಸೀಸನ್ 8ರ ಪ್ರತಿಷ್ಠಿತ ತಂಡ ಪಾಟ್ನಾ ಪೈರೇಟ್ಸ್ನ ನಾಯಕನಾಗಿ ಕರ್ನಾಟಕದ ತಂಡದ ಮಾಜಿ ನಾಯಕ ದ.ಕ.ಜಿಲ್ಲೆಯ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ.
ಹಿಂದಿನ ಸೀಸನ್ನಲ್ಲಿ ಕೋಟಿ ಸರದಾರ ಪರ್ದೀಪ ನರ್ವಾಲ್ ಕ್ಯಾಪ್ಟನ್ರಾಗಿದ್ದರು. ಪ್ರಶಾಂತ್ ರೈ ಆಯ್ಕೆ ಕರ್ನಾಟಕಕ್ಕೆ ಸಿಕ್ಕ ಮೊದಲ ಗೌರವವಾಗಿದೆ. ಈ ಬಾರಿಯ ಪ್ರೊ ಕಬಡ್ಡಿ ಲೀಗ್ನ ಸೀಸನ್ 8ರ ಪಂದ್ಯಗಳು ಡಿಸೆಂಬರ್ 22ರಿಂದ ಬೆಂಗಳೂರಿನಲ್ಲಿ ನಡೆಯಲಿವೆ.
ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕ 36ರ ಹರೆಯದ ಪ್ರಶಾಂತ್, ವಿಜಯ ಬ್ಯಾಂಕ್ನ ಕಬಡ್ಡಿ ತಂಡದ ನಾಯಕರಾಗಿದ್ದಾರೆ. ಪ್ರೊ ಕಬಡ್ಡಿ ಲೀಗ್ನ ಮೊದಲ ಮೂರು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ತಂಡದ ಸದಸ್ಯರಾಗಿದ್ದ ರೈಡರ್ ಪ್ರಶಾಂತ್ ರೈ ಬಳಿಕ ದಬಾಂಗ್ ಡೆಲ್ಲಿ, ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು. ಈ ಸಾಲಿಗೆ ಅವರು ಪಟ್ನಾ ಪೈರೇಟ್ ತಂಡದ ಪಾಲಿಗೆ ಒಲಿದಿದ್ದರು. 55 ಲಕ್ಷ ರುಪಾಯಿ ಮೊತ್ತಕ್ಕೆ ತಂಡವೂ ಅವರನ್ನು ಖರೀದಿಸಿತ್ತು. ಆದರೊಂದಿಗೆ ಇದೀಗ ನಾಯಕತ್ವವೂ ಒಲಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿನ ನಿವಾಸಿಯಾಗಿರುವ ಪ್ರಶಾಂತ್ ಅವರು ಪತ್ನಿ ವಜೇಶ್ವರಿ ರೈ ಮತ್ತು ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿ ವಾಸವಿದ್ದಾರೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿರುವಾಗಲೇ ಕಬಡ್ಡಿ ಕ್ರೀಡೆಯನ್ನು ಮೈಗೂಡಿಸಿಕೊಂಡಿದ್ದ ಪ್ರಶಾಂತ್ ಅವರು ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಟ್ ಇಲಿಯಾಸ್ ಪಿಂಟೋ ರವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು.
ದಾಖಲೆ ಮೊತ್ತಕ್ಕೆ ಹರಾಜಾಗಿದ್ದರು:
ಆರನೇ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ ಯುಪಿ ಯೋಧಾಸ್ ತಂಡಕ್ಕೆ 79 ಲಕ್ಷ ರೂ.ಗೆ ಮಾರಾಟಗೊಂಡಿದ್ದರು.
ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಶ್ರೇಯಸ್ಸು ಪಡೆದುಕೊಂಡಿದ್ದರು.
ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿಗೆ 13 ಲಕ್ಷಕ್ಕೆ ಬಿಕರಿಯಾಗಿದ್ದ ಪ್ರಶಾಂತ್ 5ನೇ ಅವತರಣಿಕೆಯಲ್ಲಿ 21 ಲಕ್ಷ ರೂ.ಗೆ ಹರಾಜುಗೊಂಡಿದ್ದರು. ಇದೀಗ 6ನೇ ಆವೃತ್ತಿಗೆ ಸುಮಾರು ಮೂರು ಪಟ್ಟು ಹೆಚ್ಚು ಹಣ ಪಡೆಯುವ ಮೂಲಕ ದೇಶದ ಅಗ್ರಮಾನ್ಯ 20 ರೈಡರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಲೀಗ್ನ ಮೊದಲ ಮೂರು ಆವೃತ್ತಿಗಳಲ್ಲಿ ಸೂಕ್ತ ಅವಕಾಶ ಸಿಗದೆ ಎಲೆಮರೆಯ ಕಾಯಿಯಂತಿದ್ದ ಪ್ರಶಾಂತ್ ರೈ, 4ನೇ ಹಾಗೂ 5ನೇ ಆವೃತ್ತಿಯಲ್ಲಿ ಮುನ್ನಲೆಗೆ ಬರುವ ಮೂಲಕ ತಾವೊಬ್ಬ ಪ್ರತಿಭಾವಂತ ರೈಡರ್ ಎಂಬುದನ್ನು ಸಾಬೀತುಪಡಿಸಿದರು. ಪ್ರತಿ ಸೀಸನ್ನಲ್ಲೂ ಅತ್ಯುನ್ನತ ಪ್ರದರ್ಶನ ನೀಡುತ್ತಲೇ ಸಾಗಿದ್ದಾರೆ..



























