ಮಂಗಳೂರು: ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಂದು ಮಂಗಳೂರಿನಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ಹೊಸ ತಿರುವು ಪಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಹಾಗೂ ಮತಾಂತರವೇ ಪ್ರಮುಖ ಕಾರಣ ಎನ್ನಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಶೇರಿಗುಪ್ಪ ಡೆತ್ ನೋಟ್ ಬರೆದಿಟ್ಟಿದ್ದು , ಅದರಲ್ಲಿ ಮತಾಂತರದ ಭೀತಿ ಹಾಗೂ ಕೌಟುಂಬಿಕ ಕಲಹವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್, ” ಡೆತ್ ನೋಟ್ ಹಾಗೂ ಸದ್ಯ ಸಿಕ್ಕ ಮಾಹಿತಿಯಂತೆ ಪ್ರಕರಣದಲ್ಲಿ, ” ಕೌಟುಂಬಿಕ ಕಲಹ ಮತ್ತು ಮತಾಂತರ ಭೀತಿ ಮೇಲ್ನೋಟಕ್ಕೆ ಕಂಡುಬಂದಿದೆ.
ನಾಗೇಶ್ ಶೇರಿಗುಪ್ಪ, ಹೆಂಡತಿ ವಿಜಯಲಕ್ಷ್ಮಿಗೆ ಹಲ್ಲೆ ನಡೆಸಿದ್ದು, ಹೀಗಾಗಿ ಕಳೆದ ಎರಡು ತಿಂಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದು ಬಳಿಕ ಆಕೆಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ದಂಪತಿಗಳಿಗಿಬ್ಬರಿಗೂ ಬುದ್ದಿ ಹೇಳಿ ಸರಿಪಡಿಸಲಾಗಿತ್ತು ಎಂದರು.
ನಾಗೇಶ್ ಶೇರಿಗುಪ್ಪ ಬರೆದ ಡೆತ್ ನೋಟ್ ನಲ್ಲಿ ನೂರ್ ಜಹಾನ್ ಎಂಬ ಮಹಿಳೆಯ ಹೆಸರನ್ನು ಉಲ್ಲೇಖಿಸಿದ್ದು , ಆಕೆಯೇ ನಮ್ಮ ಸಾವಿಗೆ ಕಾರಣ. ಪತ್ನಿಯನ್ನು ತನ್ನ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾಳೆ. ಇದೇ ಕಾರಣಕ್ಕೆ ಪತ್ನಿ ವಿಜಯಲಕ್ಷ್ಮಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ನಾಗೇಶ್ ಆರೋಪಿಸಿದ್ದಾನೆ.
ವಿಜಯಲಕ್ಷ್ಮಿ ನೂರ್ ಜಹಾನ್ ಮನೆಯಲ್ಲಿ ಮನೆ ಕೆಲಸಮಾಡುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ನೂರ್ಜಾನ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ” ಎಂದರು.





























