ಮಂಗಳೂರು: ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಗೆ ಸಹಾಯ ನೀಡುತ್ತಿದ್ದ ಆರೋಪದಲ್ಲಿ ಆತನ ಪತ್ನಿ ಹಾಗೂ ಅಚ್ಯುತ ಭಟ್ ಎಂಬಾತನ ಮಗನನ್ನೂ ಕೂಡ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ.
ರಾಜೇಶ್ ಭಟ್‌ಗೆ ಸಹಕಾರ ನೀಡಿದ್ದ ಆರೋಪದ ಮೇಲೆ ಅನಂತ ಭಟ್ ಎಂಬಾತನನ್ನು ಬಂಧಿಸಲಾಗಿತ್ತು.
ಈ ಮಧ್ಯೆ ಮತ್ತೋರ್ವ ಆರೋಪಿ ಅಚ್ಯುತ ಭಟ್ ಮತ್ತು ಆತನ ಪುತ್ರ ಅಲೋಕ್ ಎಂಬಾತ ಕೂಡ ಆರೋಪಿ ರಾಜೇಶ್ ಭಟ್‌ಗೆ ನೆರವು ನೀಡುತ್ತಿದ್ದರು ಎಂಬ ಆರೋಪವಿತ್ತು.
ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ನಿನ್ನೆ ಅಚ್ಯುತ್ ಭಟ್‌ನ ಮಗ ಆಲೋಕ್ ಮತ್ತು ರಾಜೇಶ್ ಭಟ್‌ನ ಪತ್ನಿಯನ್ನೂ ಕೂಡಾ ಬಂಧಿಸಿದ್ದಾರೆ. ಈಕೆ ಆರೋಪಿ ಪತಿಗೆ ಹಣಕಾಸಿನ ಸಹಕಾರ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಅ.18ರಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ.