ಬಂಟ್ವಾಳ: ಶಾಲೆ ಕುಸಿತಕ್ಕೊಳಗಾಗಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ ಘಟನೆ ತಾಲೂಕು ವಿಟ್ಲಪಡ್ನೂರು ಗ್ರಾಮದ ಕೋಡಪದವು ಎಂಬಲ್ಲಿ ನಡೆದಿದೆ.
ವಿಟ್ಲಪಡ್ನೂರು ಗ್ರಾಮದ ಕೋಡಪದವು ಸರಕಾರಿ ಶಾಲೆ ಶತಮಾನೋತ್ಸವದ ಹತ್ತಿರ ತಲುಪುತ್ತಿದೆ. ಆದರೇ ಶಿಕ್ಷಣ ಇಲಾಖೆ, ಜಿ.ಪಂ.ನ ತಾಂತ್ರಿಕ ಅಧಿಕಾರಿಗಳು ಕುಸಿದು ಬೀಳುವ ಹಳೆಯ ಮೂರು ಶಾಲಾ ಕೊಠಡಿಗಳನ್ನು ತೆರವು ಮಾಡುವಂತೆ 2018 ರಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಶಾಲಾ ಆಡಳಿತ ಸಮಿತಿಗೆ ನೋಟಿಸ್ ನೀಡಿದ್ದು, ಆದರೆ ಹೊಸ ಕಟ್ಟಡ ರಚನೆಗೆ ಬಿಡುಗಡೆಯಾಗಿದ್ದ 21.20ಲಕ್ಷ ರೂ. ಅನುದಾನವನ್ನು ಈವರೆಗೂ ನೀಡದೇ ಇದೀಗ ಕನ್ಯಾನ ಶಾಲೆಯಲ್ಲಿ ಹೊಸ ಕಟ್ಟಡ ನಿರ್ಮಿಸುವ ಮೂಲಕ 90 ವರ್ಷ ಇತಿಹಾಸವುಳ್ಳ ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಯನ್ನು ಕಡೆಗಣಿಸುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಸರಕಾರಿ ಶಾಲೆಗಳನ್ನ, ಕನ್ನಡ ಮಾಧ್ಯಮ ಶಾಲೆಗಳನ್ನ ಉಳಿಸಬೇಕು, ಬೆಳೆಸಬೇಕೆಂದು ರಾಜ್ಯೋತ್ಸವದ ಸಂದರ್ಭದಲ್ಲಿ ಮಂತ್ರಿಗಳು, ಇಲಾಖಾ ಅಧಿಕಾರಿಗಳು ಹೇಳುತ್ತಾರೆ. ಆದರೇ ಕಾರ್ಯರೂಪಕ್ಕೆ ತರುವುದಿಲ್ಲ ಎಂಬುದು ಕೋಡಪದವು ಶಾಲೆಯ ದುರವಸ್ಥೆಯಿಂದಾಗಿ ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಶಾಲೆಯ ಹೆಸರಿನಲ್ಲಿದ್ದ 5.40 ಎಕರೆ ಜಮೀನಿನಲ್ಲಿ ವಿಟ್ಲ ಪಡ್ನೂರು ಗ್ರಾಮಕರಣಿಕ ಹಾಗೂ ಕಂದಾಯ ಅಧಿಕಾರಿಗಳು 0.68 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮ ಮೂಲಕ ಮಂಜೂರಾತಿ ಮಾಡಿದ್ದಾರೆ. ಶಾಲೆಯ ಹೂದೋಟವನ್ನು ಸ್ಥಳೀಯ ಖಾಸಗಿ ಯುವಕ ಸಂಘವೊಂದಕ್ಕೆ ವರ್ಗಾಯಿಸಲು ತಯಾರಿ ನಡೆಸಿದ್ದಾರೆ ಎಂದು ಶಾಲಾ ಹಿತರಕ್ಷಣಾ ಸಮಿತಿಯವರ ಆರೋಪಿಸಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.