ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ರೂಪಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸ್ತಿದೆ ಎನ್ನಲಾಗಿದೆ. ಹೀಗಾಗಿ ಕ್ರೈಸ್ತ ಧರ್ಮದ ಮುಖಂಡರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿದರು.
ಸಿಎಂ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಕ್ರೈಸ್ತ ಧರ್ಮದ ಮುಖಂಡ ರೊನಾಲ್ಡ್ ಕೊಲಾಸೊ ಮತ್ತು ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನೇತೃತ್ವದ ನಿಯೋಗ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿ ಬೇಡ ಎಂದು ಮನವೊಲಿಸಲು ಯತ್ನಿಸಿದೆ ಎನ್ನಲಾಗಿದೆ. ಈ ವೇಳೆ ಕ್ರೈಸ್ತ ಧರ್ಮದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿಯನ್ನು ಸಲ್ಲಿಸಲಾಗಿದ್ದು ಮತಾಂತರ ನಿಷೇಧ ಕಾಯಿದೆ ಜಾರಿ ಬಗ್ಗೆಯೂ ಪರಾಮರ್ಶಿಸುವಂತೆ ಮನವಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅವರ ಮನವಿಯನ್ನು ಪುರಸ್ಕರಿಸಿದ ಸಿಎಂ ಬೊಮ್ಮಾಯಿ ಈವರೆಗೂ ಕ್ಯಾಬಿನೆಟ್ನಲ್ಲಿ ವಿಧೇಯಕದ ಬಗ್ಗೆ ಚರ್ಚೆ ಆಗಿಲ್ಲ. ನಿಮಗೆ ಅನ್ಯಾಯವಾಗುವ ಯಾವುದೇ ನಿಯಮಗಳು ಜಾರಿ ಮಾಡಲ್ಲ ಎಂದು ಅಭಯ ನೀಡಿದ್ದಾರಂತೆ. ಬೆಳಗಾವಿಯ ಅಧಿವೇಶನದಲ್ಲಿ ಕಾಯಿದೆ ಮಂಡನೆಯಾಗುವುದಾದ್ರೆ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ರಾಜ್ಯದಲ್ಲಿ ಮತಾಂತರವನ್ನು ಬಲವಂತವಾಗಿ ಮಾಡುವಂತಿಲ್ಲ. ಆದರೂ ಕೂಡ ಕೆಲವೊಂದು ಕಡೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂಬ ಸಿಎಂ ವಾದಕ್ಕೆ ಅದರ ಬಗ್ಗೆ ಪ್ರಕರಣ ದಾಖಲಿಸಿ ಸರಿಯಾದ ಕ್ರಮ ಕೈಗೊಳ್ಳಿ ಎಂದು ನಿಯೋಗ ತಿಳಿಸಿದೆ ಎನ್ನಲಾಗಿದೆ.
ಇನ್ನು ಸಿಎಂ ಭೇಟಿ ಬಳಿಕ ರೊನಾಲ್ಡ್ ಕೊಲಾಸೋ ಮಾಧ್ಯಮಗಳ ಜೊತೆ ಮಾತನಾಡಿದ್ದು ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ಆಗಿದೆ. ಹೀಗಿದ್ದರೂ ನಾವು ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದ್ದೇವೆ ಅಂತಾ ಬಿಂಬಿಸಲಾಗುತ್ತಿದೆ. ಈ ರೀತಿ ಬಿಂಬಿಸುವುದು ಸರಿಯಲ್ಲ. ಸಮಾಜದಲ್ಲಿ ನಾವು ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಿ. ಮೊದಲು ನಮ್ಮ ಮೇಲೆ ಆಗುತ್ತಿರುವ ದಾಳಿಯನ್ನ ತಪ್ಪಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ನೀಡುವ ಆಮಿಷ ಕೊಟ್ಟು ಮತಾಂತರ ಮಾಡಿದ್ರೆ, ಅದಕ್ಕೆ ನಾವು ಕಾರಣವಲ್ಲ ಎಂದು ನಿಯೋಗ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಇನ್ನು ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಭೇಟಿಯನ್ನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ನಿಯೋಗದಲ್ಲಿ ಮಾಜಿ ಎಂಎಲ್ಸಿ ಐವಾನ್ ಡಿಸೋಜಾ ,ರಾಧಾಕೃಷ್ಣ , ಎನ್ಆರ್ಐ ವೈಸ್ ಚೇರಮನ್ ಆರತಿ ಕೃಷ್ಣ ಮೊದಲಾದವರಿದ್ದರು.