ವಿಟ್ಲ: ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ಹೈ ಡ್ರಾಮಾ ನಡೆದ ಘಟನೆ ಇಂದು ಬಿಜೆಪಿ ಕಚೇರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಹಾಗೂ ಮಂಡಲ ಮುಖಂಡರು ಅಭ್ಯರ್ಥಿಗಳ ಘೋಷಣೆ ಮಾಡುವ ಸಮಯದಲ್ಲಿ 14 ನೇ ವಾರ್ಡಿನ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಎಂದು ಘೋಷಣೆ ಮಾಡಿದಾಗ ಕೆಲವರು ಇದಕ್ಕೆ ನಮ್ಮ ವಿರೋಧ ಇದೆ ಎಂದು ವ್ಯಕ್ತಪಡಿಸಿದ್ದಾರೆ, ಇವರ ಮಾತಿಗೆ ಮಹಾಶಕ್ತಿ ಕೇಂದ್ರ ಸಹಮತ ವ್ಯಕ್ತಪಡಿಸಿ ಕೆಲವರು ಕಚೇರಿಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಇವರ ಪ್ರತಿಭಟನೆಯ ನಡುವೆಯೂ ಅದಕ್ಕೆ ಮುಖಂಡರು ಬಗ್ಗದೆ ಇತರ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ವಿಟ್ಲದ ಬಿಜೆಪಿ ಮುಖಂಡರ ಪ್ರತಿಭಟನೆಯನ್ನು ಜಿಲ್ಲಾ ಹಾಗೂ ಮಂಡಲದ ಮುಖಂಡರು ಗಣನೆಗೆ ತೆಗೆದುಕೊಳ್ಳದೆ ಇರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕೇವಲ 5 ಜಾತಿಗಳಿಗೆ 13 ಸ್ಥಾನಗಳನ್ನು ನೀಡಿರುವುದು ಕೂಡ ಅನೇಕ ವರ್ಗಗಳಿಗೆ ಅಸಮಾಧಾನ ಮೂಡಿಸಿದೆ. ಗೌಡ 4, ಪೂಜಾರಿ 3, ಮಡಿವಾಳ 2, ಬೆಳ್ಚಡ 2, ಕುಲಾಲ 2 ಸ್ಥಾನಗಳನ್ನು ನೀಡುವ ಮೂಲಕ ಇತರ ಜಾತಿಯವರಿಗೆ ಅಸಮಾಧಾನ ಮೂಡಿ ಬಂದಿದೆ.
ಬಿಜೆಪಿಯ ಮತ ಬ್ಯಾಂಕ್ ಎಂದು ಪರಿಗಣಿಸುವ ಬ್ರಾಹ್ಮಣ ವರ್ಗಕ್ಕೆ ಒಂದು ಸೀಟು ಕೂಡ ಲಭ್ಯವಾಗಿಲ್ಲ, ಬಿಜೆಪಿಯ ಕಟ್ಟಾ ಮತದಾರರಾಗಿರುವ ಕೊಂಕಣಿ ಸಮುದಾಯದಿಂದ ಕಳೆದ ಬಾರಿ ಎರಡು ಸದಸ್ಯರಿದ್ದರೆ, ಈ ಬಾರಿ ಒಬ್ಬರಿಗೂ ಟಿಕೆಟ್ ಘೋಷಣೆ ಆಗಿಲ್ಲ, ಪ್ರಬಲ ಬಂಟ ಸಮುದಾಯದಿಂದ ಕಳೆದ ಬಾರಿ ಎರಡು ಸದಸ್ಯರಿದ್ದರೆ, ಈ ಬಾರಿ ಕೇವಲ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಒಟ್ಟಾರೆಯಾಗಿ ಬಿಜೆಪಿಯ ಟಿಕೆಟ್ ಹಂಚಿಕೆಯ ಜಾತಿ ಲೆಕ್ಕಚಾರ ಗೆಲುವಿಗೆ ತೊಡಕಾಗುವ ಲಕ್ಷಣ ಕಾಣುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ..



























