ವಿಟ್ಲ: ಪಟ್ಟಣ ಪಂಚಾಯತ್ ನ 11ನೇ ವಾರ್ಡ್ ಈಗ ಕುತೂಹಲದ ಕೇಂದ್ರ ಬಿಂದುವಾಗಿದೆ.
ಪ್ರಬಲ ಅಭ್ಯರ್ಥಿಗಳು, ವಿಟ್ಲದ ಪ್ರಥಮ ಪ್ರಜೆಗಳಾಗಿದ್ದ ಮೂರು ಜನರು ಮುಖಾಮುಖಿ ಆಗಿರುವುದು ಇದಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಬಿಜೆಪಿಯಿಂದ, ಕಾಂಗ್ರೆಸ್ಸಿಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಪಕ್ಷೇತರ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಜಾನ್ ಡಿಸೋಜ ಕಣದಲ್ಲಿದ್ದಾರೆ.
ಬಿಜೆಪಿ ಭದ್ರಕೋಟೆ ಆಗಿರುವ ಈ ವಾರ್ಡನ್ನು ಬಿಜೆಪಿಯಿಂದ ಕಸಿಯಲು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಪೈಕಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆ ಕೂಡ ಕೇಳಿಬರುತ್ತದೆ. ಕಳೆದ ಬಾರಿ 1ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಅರುಣ್ ವಿಟ್ಲ, ಈ ಬಾರಿ ಅದೇ ವಾರ್ಡಿನಿಂದ ನಿಲ್ಲುವ ಅವಕಾಶ ಇದ್ದರೂ ಕೂಡ ಸೋಲಿನ ಭಯದಿಂದ ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.
ಕುತೂಹಲಕ್ಕೆ ಕಾರಣ ಆಗಿರುವ 11 ನೇ ವಾರ್ಡಿನ ಅಭ್ಯರ್ಥಿಗಳ ಅಂತಿಮ ಚಿತ್ರಣವು ನಾಮಪತ್ರ ಹಿಂಪಡೆಯುವ ಶನಿವಾರ ಸಂಜೆಯ ಒಳಗೆ ಸಿಗುತ್ತದೆ. ವಿಟ್ಲದ ರಾಜಕೀಯ ಇತಿಹಾಸವನ್ನು ನೋಡಿದಾಗ ಪಂಚಾಯತ್ ನ ಅಧ್ಯಕ್ಷ ಆದವರು ಬಳಿಕ ರಾಜಕೀಯವಾಗಿ ಏಳಿಗೆ ಆದ ಉದಾಹರಣೆ ಇಲ್ಲ, ಸಾಕಷ್ಟು ವರ್ಚಸ್ಸು ಹೊಂದಿದ ಜಾನ್ ಡಿಸೋಜ ಹಾಗೂ ರಮಾನಾಥ ವಿಟ್ಲರವರು ಮುಂದೆ ಚುನಾವಣೆಯಲ್ಲಿ ಗೆಲ್ಲಲಿಲ್ಲ ಹಾಗೂ ಬೇರೆ ಉನ್ನತ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ, ಕಳೆದ ಅವಧಿಯಲ್ಲಿ ಅಧ್ಯಕ್ಷ ಆಗಿದ್ದ ದಮಯಂತಿ ಸಿಎಚ್ ಹಾಗೂ ಚಂದ್ರಕಾಂತಿ ಶೆಟ್ಟಿ ಅವರಿಗೆ ಈ ಬಾರಿ ಟಿಕೆಟ್ ಪಡೆಯಲು ಕೂಡ ಆಗದೇ ಕಡೆಗಣಿಸಲ್ಪಟ್ಟಿದ್ದಾರೆ. ಅರುಣ್ ವಿಟ್ಲ ಅವರ ರಾಜಕೀಯ ಮುಂದೆ ಏನಾಗಬಹುದು ಎಂದು ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ…