ಉಡುಪಿ: ಅಪ್ರಾಪ್ತ ಮಗಳ ಮೇಲೆ 2 ಬಾರಿ ಅತ್ಯಾಚಾರ ಎಸಗಿದ ಆರೋಪ ಮೇಲೆ ಬಂಧಿತನಾಗಿದ್ದ ತಂದೆಯ ವಿರುದ್ಧ ಆರೋಪ ಸಾಬೀತಾಗಿದ್ದು, ತಂದೆಯೇ ಅಪರಾಧಿ ಎಂದು ಉಡುಪಿ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಉಡುಪಿಯಲ್ಲಿ 2020ರ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ತಾಯಿ, ಕಿರಿಯ ಸೋದರ ಇಲ್ಲದ ಸಂದರ್ಭ ಅತ್ಯಾಚಾರ ಎಸಗಲಾಗಿತ್ತು. 41 ವರ್ಷದ ತಂದೆ 14 ವರ್ಷದ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. 2ನೇ ಬಾರಿಯೂ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ಎಸಗಿದ್ದ. ಯಾರಿಗಾದರೂ ಹೇಳಿದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ನೊಂದ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಳಿಕ ತಾಯಿ ಈ ಬಗ್ಗೆ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದರು.
ಫೋಕ್ಸೊ ಕಾಯ್ದೆಯಡಿ ಆರೋಪಿ ತಂದೆಯನ್ನು ಬಂಧಿಸಲಾಗಿತ್ತು. ಒಟ್ಟು 23 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 11 ಮಂದಿಯ ವಿಚಾರಣೆ ನಡೆಸಲಾಗಿದೆ. ಇವೆಲ್ಲವುಗಳ ಆಧಾರದಲ್ಲಿ ಬಾಲಕಿಯ ತಂದೆ ಅಪರಾಧಿ ಎಂದು ತೀರ್ಪು ನೀಡಲಾಗಿದೆ.
ಅಪರಾಧಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. 20 ಸಾವಿರ ರೂ.ದಂಡ, ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ 5 ಸಾವಿರ ರೂ.ದಂಡ ಹಾಗೂ ಸಂತ್ರಸ್ತ ಬಾಲಕಿಗೆ ಸರಕಾರ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ.