ಬೆಂಗಳೂರು: ಮಹಿಳೆಯೊಬ್ಬರನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭಯಾನಕ ಘಟನೆ ನಗರದ ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನಡೆದಿದೆ.
ಜಿಗಣಿ ನಿವಾಸಿ ಅರ್ಚನಾರೆಡ್ಡಿಯನ್ನು ಹತ್ಯೆಗೈದಿದ್ದಾರೆ. ಅನೈತಿಕ ಸಂಬಂದ ಹಿನ್ನಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪತಿಯೇ ತನ್ನ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಎರಡನೇ ಪತಿ ನವೀನ್ ಕುಮಾರ್ ಹಾಗೂ ಆತನ ಸಹಚರರು ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅರ್ಚನಾ ಮೊದಲನೆಯ ಪತಿಯಿಂದ ದೂರವಾದ ಬಳಿಕ ನವೀನ್ ಕುಮಾರ್ ಜೊತೆ ಬದುಕುತ್ತಿದ್ದಳು.
ಕಳೆದ ಐದಾರು ವರ್ಷಗಳಿಂದ ನವೀನ್ ಕುಮಾರ್ ಹಾಗೂ ಅರ್ಚನಾರೆಡ್ಡಿ ಜೊತೆಯಾಗಿದ್ದರು. ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿರುವ ಶಂಕೆ ಮೂಡಿದೆ. ಈ ಹಿಂದೆ ಗಲಾಟೆಯಾಗಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪದೇ ಪದೇ ಜಗಳ ಮಾಡುತ್ತಿದ್ದ ನವೀನ್ನಿಂದ ಅರ್ಚನಾ ಅಂತರ ಕಾಯ್ದುಕೊಂಡಿದ್ದರು.
ಜಿಗಣಿ ಬಿಟ್ಟು ಅರ್ಚನಾರೆಡ್ಡಿ ಬೆಳ್ಳಂದೂರಿನಲ್ಲಿ ವಾಸವಿದ್ದರು. ಅರ್ಚನಾ ಮತದಾನಕ್ಕೆ ಬರುವುದನ್ನು ತಿಳಿದಿದ್ದ ನವೀನ್, ಮತದಾನ ಮುಗಿಸಿ ಮಗ, ಚಾಲಕ ಹಾಗೂ ಇಬ್ಬರು ಯುವಕರ ಜೊತೆ ಬೆಳ್ಳಂಡೂರು ಕಡೆ ಹೊರಟಿದ್ದ ಅರ್ಚನಾರೆಡ್ಡಿ ಹೊಸ ರೋಡ್ ಸಿಗ್ನಲ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ಅಟ್ಯಾಕ್ ಮಾಡಿದ್ದಾರೆ.
ಈ ವೇಳೆ ಕಾರಿನಿಂದ ಇಳಿದು ಮಗ ಹಾಗೂ ಚಾಲಕ ತಪ್ಪಿಸಿಕೊಂಡಿದ್ದಾರೆ. ಭೀಕರವಾಗಿ ಗಾಯಗೊಂಡಿದ್ದ ಅರ್ಚನಾ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.