ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಪ್ರಥಮ ಪದವಿಯಲ್ಲಿ ಎನ್ನೆಸ್ಸೆಸ್ ಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ ಡಿ.27 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ದಾಮೋದರ ಕಣಜಾಲು ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎನ್ಎಸ್ಎಸ್ ನ ಪಾತ್ರ ಮಹತ್ತರವಾದದ್ದು. ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಗ್ರಂಥಪಾಲಕರಾದ ರಾಮ ಕೆ ಇವರು ಎನ್ಎಸ್ಎಸ್ ನಲ್ಲಿ ಸ್ವಯಂಸೇವಕರಾಗಿ ತಮ್ಮ ಅನುಭವವನ್ನು ಹಂಚಿಕೊಂಡರಲ್ಲದೇ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಐಕ್ಯೂಎಸಿ ಸಂಚಾಲಕರು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್ ಇವರು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ನ ಕುರಿತು ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ಸ್ವಾಮಿ ವಿವೇಕಾನಂದರ ಮತ್ತು ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಒಳಗೊಂಡು ರೂಪಿತವಾದಂತಹ ಎನ್ನೆಸ್ಸೆಸ್ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ದ್ವಿತೀಯ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳು ಎನ್ಎಸ್ಎಸ್ ನ ಇತಿಹಾಸ, ಧ್ಯೇಯವಾಕ್ಯ, ಉದ್ದೇಶ, ಎನ್ನೆಸ್ಸೆಸ್ ಲಾಂಛನ, ಎನ್ನೆಸ್ಸೆಸ್ ಗೀತೆ, ಕಾಲೇಜು ಮಟ್ಟದಲ್ಲಿ ಎನ್ನೆಸ್ಸೆಸ್ ಕಾರ್ಯಚಟುವಟಿಕಗಳನ್ನು ನಿರ್ವಹಿಸಲು ರೂಪಿತವಾಗಿರುವ ಸಮಿತಿಗಳು ಮತ್ತು ಅವುಗಳ ಕಾರ್ಯ, ಎನ್ನೆಸ್ಸೆಸ್ ನ ದೈನಂದಿನ ಚಟುವಟಿಕೆಗಳು ಮತ್ತು ವಾರ್ಷಿಕ ವಿಶೇಷ ಶಿಬಿರದ ಕುರಿತು ಮಾಹಿತಿ ನೀಡಿದರು.
ಘಟಕ ನಾಯಕರಾದ ಸಾರ್ಥಕ್ ಟಿ, ಶ್ರುತಿಕಾ ಪಿ, ಶೋಭಿತ್ ಕುಮಾರ್ ಕೆ, ಲಿಖಿತಾ ಕೆ ಹಾಗೂ ವಿವಿಧ ಸಮಿತಿಯ ನಾಯಕರು ಮತ್ತು ಸ್ವಯಂ ಸೇವಕರುಗಳಾದ ರಂಜಿತಾ ಜಿ, ಚೈತ್ರ ಬಿ, ಅನುಪಮ ಕೆ, ಕವಿತಾ ಎನ್, ಶ್ರುತಿ ಸಿ, ರಕ್ಷಿತ್ ರೈ ಎ, ಅಂಕಿತ್ ಕೆ ಆರ್, ಮಿಥುನ್ ರಾಜ್ ಸಿ ಎಚ್, ಜಯಶ್ರೀ, ಕೃತಿ ರೈ ಕೆ ಮತ್ತು ಶೈಲಜಾ ಎನ್ ಇವರುಗಳು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ನೀಡಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್ ಇವರು ಕಾರ್ಯಕ್ರಮದ ಕೊನೆಯದಾಗಿ ಎನ್ನೆಸ್ಸೆಸ್ ನ ಕಾರ್ಯವೈಖರಿ, ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳ ಜವಾಬ್ಧಾರಿ ಈ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ದೀಕ್ಷಿತ್ ಕುಮಾರ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸ್ವಯಂ ಸೇವಕಿಯರಾದ ಲಿಖಿತಾ ಕೆ, ಕೃತಿ ರೈ ಕೆ, ಶೈಲಜಾ ಎನ್ ಪ್ರಾರ್ಥಿಸಿದರು. ಘಟಕ ನಾಯಕಿ ಶ್ರುತಿಕಾ ಪಿ ಸ್ವಾಗತಿಸಿದರು, ರಕ್ಷಿತ್ ರೈ ಎ ವಂದಿಸಿದರು. ಘಟಕ ನಾಯಕ ಸಾರ್ಥಕ್ ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.





























