ಮಂಗಳೂರು: ಕಳೆದ ಅಕ್ಟೋಬರ್ ನಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟಿದ್ದ ದಂಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ಮಂಗಳವಾರ ನಡೆದಿದೆ.
ಕುಟುಂಬ ಜೀವನದಲ್ಲಿ ಕಂಡು ಬಂದ ಹಲವಾರು ಉದ್ವಿಗ್ನತೆಗಳು, ಸಮಸ್ಯೆಗಳಿಂದ ಮನನೊಂದಿದ್ದ ದಂಪತಿಗಳಿಬ್ಬರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನಡೆಸಿದ ಕೌನ್ಸ್ಲಿಂಗ್ ನಲ್ಲಿ ಸಂಸಾರದ ಪ್ರಾಮುಖ್ಯತೆಯನ್ನು ಅರಿತುಕೊಂಡ ಪತಿ ಪತ್ನಿಯರಿಬ್ಬರು ಮನಪರಿವರ್ತನೆಯಿಂದಾಗಿ ಮತ್ತೆ ಒಂದಾಗಿದ್ದಾರೆ.
ಮಂಗಳೂರಿನ ಮರಕಡದ ನಿವಾಸಿಗಳಾದ ದಂಪತಿಗಳು ವೈಮನಸ್ಸಿನಿಂದ ನೊಂದು ಬೇರೆ ಬೇರೆಯಾಗಲು ನಿಶ್ಚಯಿಸಿದ್ದರು. ಪತಿ ಬಿ.ಫಾರ್ಮ್ ಓದಿಕೊಂಡು ಮೆಡಿಕಲ್ ಶಾಪ್ ಹೊಂದಿದ್ದರು.
ಪತ್ನಿ ಇಬ್ಬರು ಮಕ್ಕಳ ಹೆಸರಲ್ಲಿ ತಾನು ದುಡಿದ ಹಣದಲ್ಲಿ ಡೆಪೋಸಿಟ್ ಇಟ್ಟಿದ್ದರು. ತಮ್ಮ ದಾಂಪತ್ಯದಲ್ಲಿ ಅದ ಭಿನ್ನಾಭಿಪ್ರಾಯಗಳು ಅವರನ್ನು ಘರ್ಷಣೆಗೆ ನೂಕಿತ್ತು.
ಮುಂದಿನ ಜೀವನ ಜಂಟಿಯಾಗಿ ನೂಕುವುದು ಅವರಿಬ್ಬರಿಗೂ ಕಠಿಣವೆನಿಸಿತು. ಸವಾಲುಗಳನ್ನು ಎದುರಿಸಲಾಗದೆ ಇಬ್ಬರು ನಿರ್ಧಾರದಿಂದ ಪರಸ್ಪರ ದೂರವಾದರು.
ಪತ್ನಿ ತನ್ನ ಮಕ್ಕಳ ಜೊತೆಗೆ ಉಡುಪಿಯಲ್ಲಿ ಪ್ರತ್ಯೇಕವಾಗಿ ಜೀವನ ಸಾಗಿಸಿದರು. ಆದರೆ ತನಗೆ ಬದುಕಲು ಕಷ್ಟವಾದಾಗ, ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಆರ್ಥಿಕ ಸಮಸ್ಯೆ ಕಂಟಕವಾದಾಗ ಸಹಾಯ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ಪ್ರಾಧಿಕಾರವು ಇಬ್ಬರನ್ನು ಕಚೇರಿಗೆ ಕರೆತಂದು 4 ಬಾರಿ ಕೌನ್ಸೆಲಿಂಗ್ ಗೆ ಒಳಪಡಿಸಿದರು. ಇಬ್ಬರನ್ನೂ ಒಟ್ಟಿಗೆ ಬಾಳುವಂತೆ ಮನಪರಿವರ್ತನೆ ಮಾಡಲಾಯಿತು. ನೆಮ್ಮದಿಯ ಬದುಕಿಗೆ ಬೇಕಾದ ಮೂಲಭೂತ ಅಂಶಗಳ ಬಗ್ಗೆ, ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ, ಇದರಿಂದ ಮಕ್ಕಳ ಹಾಗೂ ಅವರ ಭವಿಷ್ಯದ ಮೇಲೆ ಆಗುವಂತಹ ಪರಿಣಾಮಗಳ ವಿವರವಾದ ಮಾಹಿತಿಯನ್ನು ನೀಡಲಾಯಿತು.
ಈ ಮಾಹಿತಿ ಗಾಢವಾದ ಪರಿಣಾಮವನ್ನು ಬೀರಿದ್ದು, ವಿವಾಹ ವಾರ್ಷಿಕೋತ್ಸವದ ಶುಭ ದಿನದಂದೇ ಮತ್ತೆ ಒಂದಾಗಿ ಜೀವನ ನಡೆಸಲು ತಯಾರಾಗಿದ್ದಾರೆ. ಈ ಉತ್ತಮ ಕಾರ್ಯದಲ್ಲಿ ಭಾಗಿಯಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಮುರಲೀಧರ ಪೈ.ಬಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೀಕರ್ ಅವರು ಅತ್ಯಂತ ಅಲ್ಪ ಅವಧಿಯಲ್ಲಿ ದಂಪತಿಗಳನ್ನು ಒಂದುಗೂಡಿಸಿದ್ದಾರೆ. ಇವರ ಈ ಕಾರ್ಯದಿಂದ ದಂಪತಿಗಳಿಬ್ಬರು ಖುಷಿಯಾಗಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಶ್ಲಾಘಿಸಿದ್ದಾರೆ.