ಬಂಟ್ವಾಳ: ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ವೇಷವನ್ನು ವರನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಮಂಗಲ್ಪಡಿ ನಿವಾಸಿ ಪಾತಿಮಾ ಡ್ರೆಸ್ ಪುತ್ತೂರು ಇದರ ಮಾಲಕ ಅಹ್ಮದ್ ಮೂಜಿತಬ(28), ಬಾಯರ್ ಪದವು ನಿವಾಸಿ ಮೊಯ್ದೀನ್ ಮುನಿಶ್ (19) ಎನ್ನಲಾಗಿದೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಅಝೀಝ್ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿದ್ದು, ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ (ತಾಳ) ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದು, ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡು ವರ ಆಗಮಿಸಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಬಗ್ಗೆ ವಿಟ್ಲ ಹಿಂದೂ ಜಾಗರಣೆ ವೇದಿಕೆ ಕಾರ್ಯದರ್ಶಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ವಿಟ್ಲ ಠಾಣೆ ಪೊಲೀಸರು ಮದುಮಗ ಬಾಷಿತ್ ಸಹೋದರ ಅರ್ಷಾದ್ ನನ್ನು ಜ .8 ರಂದು ಮಂಜೇಶ್ವರದಲ್ಲಿ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಆತನನ್ನು ಬಿಡುಗಡೆಗೊಳಿಸಿದ್ದರು.