ಬೆಂಗಳೂರು: 2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ತಮ್ಮ ಜತೆ ಅರ್ಜುನ್ ಸರ್ಜಾ (Arjun Sarja) ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮೂರು ವರ್ಷ ತನಿಖೆ ನಡೆಸಿದರೂ ಕೂಡ ಪೊಲೀಸರಿಗೆ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ (B Report) ಸಲ್ಲಿಸಿದ್ದರು. ಈ ವರದಿಗೆ ಶ್ರುತಿ ಹರಿಹರನ್ ಆಕ್ಷೇಪಣೆ ಸಲ್ಲಿಸಿಲ್ಲ. ಈ ಕಾರಣಕ್ಕೆ 8ನೇ ಎಸಿಎಂಎಂ ನ್ಯಾಯಾಲಯ ವರದಿಯನ್ನು ಅಂಗೀಕರಿಸಿದೆ. ಹೀಗಾಗಿ, ಪ್ರಕರಣದಲ್ಲಿ ಅರ್ಜುನ್ ಸರ್ಜಾಗೆ ಗೆಲುವಾಗಿದೆ.
ಪ್ರಕರಣವೊಂದರ ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಅಗತ್ಯ ಇರುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಅಂತಿಮ ವರದಿಯೇ ಬಿ ರಿಪೋರ್ಟ್. ಈಗ ನ್ಯಾಯಾಲಯ ಈ ವರದಿಯನ್ನು ಒಪ್ಪಿರುವುದರಿಂದ ಪ್ರಕರಣದಲ್ಲಿ ಅರ್ಜುನ್ ಸರ್ಜಾ ಯಾವುದೇ ತಪ್ಪು ಮಾಡಿಲ್ಲ ಎಂಬುದು ಸಾಬೀತಾದಂತಾಗಿದೆ.
ಅರುಣ್ ವೈದ್ಯನಾಥನ್ ನಿರ್ದೇಶನದ ‘ವಿಸ್ಮಯ’ ಸಿನಿಮಾದಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರು ಗಂಡ-ಹೆಂಡತಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್ ಆರೋಪ ಹೊರಿಸಿದ ಬಳಿಕ ಇಡೀ ಸ್ಯಾಂಡಲ್ವುಡ್ನಲ್ಲಿ ವಿವಾದದ ಬೆಂಕಿ ಹೊತ್ತಿಕೊಂಡಿತ್ತು. ಕೆಲವರು ಶ್ರುತಿ ಪರವಾಗಿ ಮಾತನಾಡಿದ್ದರೆ, ಅನೇಕರು ಅರ್ಜುನ್ ಸರ್ಜಾಗೆ ಬೆಂಬಲ ನೀಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಬಗ್ಗೆ ಸಭೆ ನಡೆಸಲಾಗಿತ್ತು. ಅಂಬರೀಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಿ ಸಂಧಾನಕ್ಕೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿರಲಿಲ್ಲ.
‘ವಿಸ್ಮಯ’ ಶೂಟಿಂಗ್ ನಡೆದಿದ್ದು 2015-16ರ ಸಮಯದಲ್ಲಿ. ಮೀಟೂ ಆರೋಪ ಕೇಳಿಬಂದಿದ್ದು 2018ರಲ್ಲಿ. ಘಟನೆ ನಡೆದು ಎರಡು ವರ್ಷ ಕಳೆದ ಬಳಿಕ ಅವರು ದೂರು ನೀಡಿದ್ದರು. ಮೂರು ವರ್ಷ ತನಿಖೆ ನಡೆಸಿದರೂ ಕೂಡ ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲಾಗಿತ್ತು.