ವಿಟ್ಲ : ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಎಸೆಯುತ್ತಿರುವ ಕಲ್ಲಕಟ್ಟ ತೋಡಿನಲ್ಲಿರುವ ಕುಡಿಯುವ ನೀರಿನ ಬಾವಿಗೆ ಕೊಳಚೆ ನೀರು ಸೇರುತ್ತಿದ್ದರೂ ವಿಟ್ಲ ಪಟ್ಟಣ ಪಂ. ಇನ್ನೂ ಎಚ್ಚರಗೊಳ್ಳದೇ 60ಕ್ಕೂ ಹೆಚ್ಚು ಕುಟುಂಬಗಳು ಕೊಚ್ಚೆ ನೀರು ಕುಡಿಯುವಂತಾಗಿದೆ.
ವಿಟ್ಲ ಪ.ಪಂ.ವ್ಯಾಪ್ತಿಯ ಒಂದನೇ ವಾರ್ಡಿನ ಚಂದಳಿಕೆ ಕಲ್ಲಕಟ್ಟ ತೋಡಿನಲ್ಲಿ ಕುಡಿಯುವ ನೀರಿನ ಬಾವಿಯಿದೆ. ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನ 60ಕ್ಕೂ ಹೆಚ್ಚು ಮನೆಗಳಿಗೆ ಇದೇ ಬಾವಿಯ ಕುಡಿಯುವ ನೀರು ಅನಿವಾರ್ಯವಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯ, ಕೋಳಿ, ಮೀನಿನ ತ್ಯಾಜ್ಯ ಗಳಲ್ಲದೇ ಸತ್ತ ನಾಯಿ, ಬೆಕ್ಕುಗಳನ್ನು ಕಲ್ಲಕಟ್ಟ ಸೇತುವೆಯಿಂದ ಕೆಳಗಿನ ತೋಡಿಗೆ ಬೇಕಾಬಿಟ್ಟಿಯಾಗಿ ಎಸೆಯುತ್ತಿದ್ದಾರೆ.

ಸೇತುವೆಯ ಅಡಿಭಾಗದಲ್ಲಿರುವ ಕುಡಿಯುವ ನೀರಿನ ಬಾವಿಯ ಸುತ್ತಮುತ್ತ ಏಳಡಿಯಷ್ಟು ದುರ್ನಾತದಿಂದ ಕೂಡಿದ ಕೊಳಚೆ ನೀರು ಶೇಖರಣೆಯಾಗಿದೆ. ಕೊಚ್ಚೆ ನೀರು ಸೇರುತ್ತಿರುವ ಬಾವಿಯ ನೀರು ಟ್ಯಾಂಕಿನ ಮೂಲಕ ಮನೆಗಳಿಗೆ ಸರಬರಾಜಾಗುತ್ತಿದೆ.
ದುರ್ನಾತಮಯ ನೀರು ಸರಬರಾಜು ಆಗುತ್ತಿರುವ ಬಗ್ಗೆ ಸ್ಥಳೀಯರು ಪ.ಪಂ.ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನ ಆರೋಪಿಸಿದ್ದಾರೆ.



ಇನ್ನಾದರೂ ಪ.ಪಂ.ನ ಅಧಿಕಾರಿಗಳು ಎಚ್ಚೆತ್ತು ಜನರಿಗೆ ಮಾರಕ ರೋಗ ಹರಡುವ ಮುನ್ನ ಶುಚಿಗೊಳಿಸಬೇಕಾಗಿದೆ.
