ಉಪ್ಪಿನಂಗಡಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಇರುವ ಅನಧಿಕೃತ ಅಂಗಡಿಗಳನ್ನು ತೆರವು ಮಾಡುವ ಸಲುವಾಗಿ ಸ್ಥಳಕ್ಕೆ ತೆರಳಿದಾಗ ಸ್ಥಳೀಯ 6 ಮಂದಿ ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪಿಡಿಒ. ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಉಪ್ಪಿನಂಗಡಿಯ ಯೋಗೀಶ್ ಪ್ರಭು, ಅವರ ಪತ್ನಿ, ರಾಜೇಶ್ ಪ್ರಭು, ಗೋಕುಲದಾಸ್ ಭಟ್, ಉತ್ತಮ ಭಟ್, ಉದಯ ಭಟ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಆರೋಪಿತರು ಅನಧಿಕೃತ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು, ಇದನ್ನು ಸ್ಥಗಿತಗೊಳಿಸುವಂತೆ ಪಂಚಾಯಿತಿಗೆ ನೀಡಿರುವ ಮನವಿಯಂತೆ ಅ.28 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆಗಿರುವ ನಿರ್ಣಯದಂತೆ ಜ.27 ರಂದು ಕಾರ್‍ಯದರ್ಶಿ ಮತ್ತು ಸಿಬ್ಬಂದಿಗಳ ಜೊತೆಯಾಗಿ ಕಾರ್‍ಯಾಚರಣೆಗೆ ಹೋದಾಗ ಯೋಗೀಶ್ ಪ್ರಭು ಮತ್ತು ಅವರ ಪತ್ನಿ ನಡೆಸುತ್ತಿರುವ ಅನಧಿಕೃತ ಅಂಗಡಿಯನ್ನು ತೆರವುಗೊಳಿಸುವಂತೆ ತಿಳಿಸಲಾಗಿ ಅಂಗಡಿಯ ಶೆಟರ್ ಎಳೆದು ಬೀಗ ಹಾಕುವ ಸಂದರ್ಭದಲ್ಲಿ ಅಡ್ಡಿಪಡಿಸಿ ಬೀಗ ಒಡೆದು ದೂರುದಾರರನ್ನು ತಳ್ಳಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೆ ಸ್ಥಳದಲ್ಲಿದ್ದ ಇತರರು ವಾಗ್ವಾದಕ್ಕಿಳಿದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.