ಧಾರವಾಡ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಬೇಕಾದರೆ ಪೊಲೀಸರ ಕಣ್ಣುತಪ್ಪಿಸಿ ಅಥವಾ ಠಾಣೆಯ ದೂರದಲ್ಲಿ ಕಳ್ಳತನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಪೊಲೀಸರ ವಾಹನವನ್ನೇ ಕದ್ದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆಸಿದೆ.
ಅಣ್ಣಿಗೇರಿ ನಗರದ ನಾಗಪ್ಪ ಹಡಪದ ಬಂಧಿತ ಆರೋಪಿ. ನಾಗಪ್ಪ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಬೋಲೆರೊ ವಾಹನವನ್ನು ಕಳ್ಳತನ ಮಾಡಿದ್ದಾನೆ. ನಂತರ ಅದನ್ನು ಹಾವೇರಿ ಜಿಲ್ಲೆಯ ಬ್ಯಾಡಗಿವರೆಗೆ ತೆಗೆದುಕೊಂಡು ಹೋಗಿದ್ದಾನೆ.
ನಿನ್ನೆ ಬೆಳಗಿನ ಜಾವ 4 ಗಂಟೆಗೆ ವಾಹನ ತೆಗೆದುಕೊಂಡು ಪರಾರಿಯಾಗಿದ್ದ ನಾಗಪ್ಪ ಬ್ಯಾಡಗಿವರೆಗೆ ಹೋಗಿರುವ ವಿಷಯವನ್ನು ಪೊಲೀಸರು ತಿಳಿದಿದ್ದಾರೆ. ಆತನನ್ನು ಹಾಗೂ ವಾಹನವನ್ನು ಬ್ಯಾಡಗಿಯಲ್ಲೇ ಹಿಡಿದಿದ್ದಾರೆ. ಸದ್ಯ ಪೊಲೀಸರು ಬ್ಯಾಡಗಿಯಿಂದ ಪೊಲೀಸ್ ಜಿಪ್ ಹಾಗೂ ನಾಗಪ್ಪನನ್ನು ಕರೆತಂದು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






























