ಬೆಂಗಳೂರು: ಹಿಜಾಬ್ ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಿಕ್ಷಣ ಸಂಸ್ಥೆಗಳು ಪುನಾರಂಭವಾಗಬೇಕು. ಪ್ರಕರಣ ಬಾಕಿ ಇರುವವರೆಗೆ ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟವರು ಯಾವುದೇ ತೆರನಾದ ಧಾರ್ಮಿಕ ಉಡುಪು ಅಥವಾ ಶಿರ ವಸ್ತ್ರ ಹಾಕಬಾರದು ಎಂದು ನಾವು ಆದೇಶ ಮಾಡುತ್ತೇವೆ. ಎಲ್ಲರನ್ನೂ ನಾವು ನಿರ್ಬಂಧಿಸುತ್ತೇವೆ. ಶಾಂತಿ ಮತ್ತು ನೆಮ್ಮದಿ ಮುಖ್ಯ ಎಂದು ಹೈಕೋರ್ಟ್ ಹೇಳಿದ್ದು ವಿಚಾರಣೆಯನ್ನು ಸೋಮವಾರ ಮದ್ಯಾಹ್ನಕ್ಕೆ ಮುಂದೂಡಿದೆ.
ಹಿಜಾಬ್ ವಿವಾದ ಸಂಬಂಧ ಮೂರನೇ ದಿನ ವಿಚಾರಣೆ ಇಂದು ಮಧ್ಯಾಹ್ನ ಆರಂಭವಾಗಿದ್ದು, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರು, ಹಿಜಾಬ್ ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ಸ್ಥಗಿತಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ. ವಿವಾದ ಕಾರಣದಿಂದ ಮಕ್ಕಳನ್ನು ಶಿಕ್ಷಣದಿಂದ ದೂರ ಇಡುವುದು ಸರಿಯಲ್ಲ ಎಂದು ಹೇಳಿದರು.
ಇದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡರು. ಇದೇ ವೇಳೆ ಅರ್ಜಿದಾರರ ಪರ ವಕೀಲ ಕಾಮತ್ ಅವರು, ಹಿಜಾಬ್ ಧಾರ್ಮಿಕ ಆಚರಣೆಯಲ್ಲ. ಮೂಲಭೂತ ಹಕ್ಕು ಎಂದು ವಾದ ಮಂಡನೆ ಮಾಡಿದರು. ವಾದ ಪ್ರತಿವಾದ ಅಲಿಸಿದ ತ್ರಿಸದಸ್ಯ ಪೀಠ ಎಲ್ಲಾ ಥರದ ಆಚರಣೆಗಳಿಂದ (ಧಾರ್ಮಿಕ ಉಡುಪು ಧರಿಸುವುದು) ದೂರವಿರುವಂತೆ ನಾವು ಎಲ್ಲರನ್ನೂ ನಿರ್ಬಂಧಿಸುತ್ತಿದ್ದೇವೆ. ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತುಗಳನ್ನ ಬಳಸಬಾರದು. ವಿಚಾರಣೆ ಮುಗಿಯುವವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಶಾಲು ಧರಿಸುವಂತಿಲ್ಲರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು . ಪ್ರಕರಣದ ಕುರಿತು ನ್ಯಾಯಾಲಯ ತೀರ್ಮಾನ ಮಾಡುವವರೆಗೆ ಯಾವುದೇ ಧಾರ್ಮಿಕ ಸಂಕೇತ ಇರುವ ಉಡುಪು ಧರಿಸದಂತೆ ಮಧ್ಯಂತರ ಆದೇಶ ಮಾಡುವುದಾಗಿ ಹೇಳಿದ ಪೀಠ (ಇನ್ನೂ ಆದೇಶ ಹೊರಡಿಸಿಲ್ಲ) ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.